ದ್ರಾಕ್ಷಿ ತಿನ್ನುವ ಮೊದಲು ಸ್ವಚ್ಛಗೊಳಿಸಿ: ಆರೋಗ್ಯ ಕಾಪಾಡುವ ಸರಳ ಟಿಪ್ಸ್
ಹೊಳೆಯುವ ದ್ರಾಕ್ಷಿ ಗೊಂಚಲು ನೋಡುತ್ತಿದ್ದಂತೆಯೇ ತಿನ್ನಬೇಕೆನ್ನಿಸುವುದು ಸಹಜ. ಆದರೆ ಅವು ಹೊರನೋಟಕ್ಕೆ ಸ್ವಚ್ಛವಾಗಿ ಕಾಣಿಸಿದರೂ, ಅವುಗಳ ಮೇಲೆ ಕೀಟನಾಶಕ ಅಂಶಗಳು, ಮೇಣದ ಲೇಪನ ಮತ್ತು ಧೂಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಮಕ್ಕಳು ಹಣ್ಣುಗಳನ್ನು ನೇರವಾಗಿ ಸೇವಿಸುವುರಿಂದ ಅಥವಾ ಫ್ರಿಜ್‌ನಿಂದ ತೆಗೆದು ತಿನ್ನುವ ಮುನ್ನ ಜಾಗ್ರತೆ ವಹಿಸುವುದು ಅತ್ಯಗತ್ಯ.
ದ್ರಾಕ್ಷಿಯ ಚರ್ಮವು ತೆಳುವಾಗಿರುವುದರಿಂದ ರಾಸಾಯನಿಕಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ಕೇವಲ ನೀರಿನಿಂದ ತೊಳೆಯುವುದರಿಂದ ಮೇಲ್ಮೈ ಧೂಳು ಮಾತ್ರ ಹೋಗುತ್ತದೆ. ಆದ್ದರಿಂದ ಈ ಕೆಳಗಿನ ವಿಧಾನಗಳ ಮೂಲಕ ಸ್ವಚ್ಛಗೊಳಿಸುವುದು ಉತ್ತಮ.

1. ಮೊದಲು ತಣ್ಣೀರಿನಲ್ಲಿ ತೊಳೆಯಿರಿ
ದ್ರಾಕ್ಷಿಯನ್ನು ಒಂದು ಪಾತ್ರೆಯಲ್ಲಿ ಇಟ್ಟು 20-30 ಸೆಕೆಂಡುಗಳ ಕಾಲ ಹರಿಯುವ ತಣ್ಣೀರಿನಲ್ಲಿ ನಿಧಾನವಾಗಿ ಉಜ್ಜುತ್ತಾ ತೊಳೆಯಿರಿ. ಇದು ಮೇಲ್ಮೈನಲ್ಲಿರುವ ಸಾಮಾನ್ಯ ಕೊಳಕನ್ನು ತೆಗೆಯುತ್ತದೆ.
2. ಅಡಿಗೆ ಸೋಡಾ ಬಳಸಿ
ಒಂದು ಲೀಟರ್ ನೀರಿಗೆ ಒಂದು ಟೀ ಚಮಚ ಅಡಿಗೆ ಸೋಡಾ ಬೆರೆಸಿ, ಅದರಲ್ಲಿ ದ್ರಾಕ್ಷಿಯನ್ನು 10 - 15 ನಿಮಿಷಗಳ ಕಾಲ ನೆನೆಸಿಡಿ. ಇದು ಕೀಟನಾಶಕಗಳ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಂತರ ಮತ್ತೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.
3. ವಿನೆಗರ್ ಬಳಕೆ
ಒಂದು ಭಾಗ ವಿನೆಗರ್‌ಗೆ ಮೂರು ಭಾಗ ನೀರು ಸೇರಿಸಿ ದ್ರಾಕ್ಷಿಯನ್ನು 5- 10 ನಿಮಿಷ ನೆನೆಸಿಡಿ. ಇದು ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿನೆಗರ್ ವಾಸನೆ ಹೋಗಲಾಡಿಸಲು ಕೊನೆಯಲ್ಲಿ ಮತ್ತೊಮ್ಮೆ ನೀರಿನಿಂದ ತೊಳೆಯಿರಿ.
4. ಒಣಗಿಸಿ ಸಂಗ್ರಹಿಸಿ
ತೊಳೆದ ದ್ರಾಕ್ಷಿಯನ್ನು ಒದ್ದೆಯಾಗಿಯೇ ಫ್ರಿಜ್‌ನಲ್ಲಿ ಇಡಬೇಡಿ, ಶುದ್ಧವಾದ ಬಟ್ಟೆಯಿಂದ ಒರೆಸಿ ಅಥವಾ ಗಾಳಿಯಲ್ಲಿ ಒಣಗಲು ಬಿಡಿ. ತೇವಾಂಶವಿಲ್ಲದಿದ್ದರೆ ಹಣ್ಣುಗಳು ಹೆಚ್ಚು ದಿನ ತಾಜಾವಾಗಿರುತ್ತವೆ.
ಸಣ್ಣ ಸಲಹೆ: ಒಮ್ಮೆಲೇ ಎಲ್ಲ ದ್ರಾಕ್ಷಿಗಳನ್ನು ತೊಳೆಯುವುದಕ್ಕಿಂತ, ತಿನ್ನುವ ಮೊದಲು ಬೇಕಾದಷ್ಟು ಮಾತ್ರ ತೊಳೆಯುವುದು ಉತ್ತಮ. ಇದರಿಂದ ಹಣ್ಣುಗಳು ಬೇಗನೆ ಕೊಳೆಯುವುದನ್ನು ತಡೆಯಬಹುದು.
ದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಅದನ್ನು ಶುದ್ಧೀಕರಿಸುವ ಕ್ರಮವೂ ಅಷ್ಟೇ ಮುಖ್ಯ. ಕೇವಲ 10 ನಿಮಿಷಗಳ ಈ ಮುನ್ನೆಚ್ಚರಿಕೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡುತ್ತದೆ.












Click it and Unblock the Notifications