ಮರ್ಯಾದಾ ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಸಿಎಂ ಸಿದ್ದರಾಮಯ್ಯ
ಇತ್ತೀಚಿಗೆ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಏಳು ತಿಂಗಳ ಗರ್ಭಿಣಿ ಮಾನ್ಯ ಅವರ ಮರ್ಯಾದಾ ಹತ್ಯೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ತೀವ್ರ ಖಂಡನೆಯೂ ವ್ಯಕ್ತವಾಗಿ ಇಂತಹ ಹತ್ಯೆಗಳನ್ನು ಹತ್ತಿಕ್ಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಮರ್ಯಾದಾ ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದಾಗೇಡು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ ಸಲ್ಲಿಸಬೇಕು. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ
ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ-ಹಲ್ಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು. ಈ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮರ್ಯಾದಾ ಹತ್ಯೆಯಂತಹ ಪ್ರಕರಣಗಳ ತಡೆಗೆ ಕಠಿಣ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಕುರಿತು ಪರಿಶೀಲಿಸಲಾಗುವುದು ಎಂದು ಸಚಿವ ಹೆಚ್.ಸಿ.ಮಹಾದೇವಪ್ಪ ತಿಳಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಮರ್ಯಾದಾ ಹತ್ಯೆ ಪ್ರಕರಣದ ಸಂತ್ರಸ್ತರಾದ ವಿವೇಕಾನಂದ ದೊಡ್ಡಮನಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾನ್ಯ ಹೆಸರಿನಲ್ಲೇ ಪ್ರತ್ಯೇಕ ಕಾಯ್ದೆಗೆ ಚಿಂತನೆ ನಡೆದಿದೆ ಎಂದಿದ್ದರು.
ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯ ಬರ್ಬರ ಕೊಲೆ ನಡೆದಿತ್ತು. ಮಗಳು ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆಯೇ ತನ್ನ ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಘಟನೆ ವರದಿ ವರದಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರೀತಿಸಿ ಮದುವೆಯಾಗಿದ್ದ ಮಾನ್ಯ ಬರ್ಬರವಾಗಿ ಕೊಲೆಯಾದರೆ, ಮದುವೆಯಾಗಿದ್ದ ವಿವೇಕನಾಂದ ಅವರ ಕುಟುಂಬದ ಮೇಲೂ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದರು. ರಾಜ್ಯದಲ್ಲಿ ಪದೇ ಪದೇ ಇಂತಹ ಮರ್ಯಾದಾ ಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ವಿಶೇಷ ಕಾನೂನು ರಚನೆ ಮಾಡಲು ಮಂದಾಗಿದೆ.












Click it and Unblock the Notifications