ಅಂತರ್ಜಾತಿ ಮದುವೆ: ಅವರಿಂದ ಕಲಿಯಬೇಕಾದ ಪಾಠಗಳಿವೆ: ಚೇತನಾ ತೀರ್ಥಹಳ್ಳಿ ಬರಹ
ಕರ್ನಾಟಕದಲ್ಲಿ ಮರ್ಯಾದೆಗೇಡು ಹತ್ಯೆಗೆ ರಾಜ್ಯ ಸರ್ಕಾರವು ಕಾನೂನು ರೂಪಿಸುವ ವಿಷಯ ಗಂಭೀರವಾಗಿ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ನಡೆದಿದೆ. ಈ ಬಗ್ಗೆ ಬರಹಗಾರ್ತಿ, ಕವಿ ಗಾಯತ್ರಿ ಎಚ್.ಎನ್ ಅವರ ಬರಹ ಇಲ್ಲಿದೆ.
ಒಬಿಸಿ ಮತ್ತು ಇತರ ಎಲ್ಲಾ ಜಾತಿಯವರು ಬ್ರಾಹ್ಮಣರನ್ನು ನೋಡಿ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ವ್ರತ ಮಾಡೋದನ್ನು ಕಲಿಯೋ ಬದಲು ಅಂತರ್ಜಾತಿ ಮದುವೆಯಾದ ಹೆಣ್ಣುಮಕ್ಕಳನ್ನು ಕೊಲ್ಲದಿರುವ ಪಾಠ ಕಲಿಯಬಹುದಿತ್ತು. (ಅಧಿಕೃತ ಅಂಕಿ ಅಂಶಗಳ ಪ್ರಕಾರ ಬ್ರಾಹ್ಮಣ ಸಮುದಾಯದಲ್ಲಿ ಅಂತರ್ಜಾತಿ ಮದುವೆ ಪ್ರಮಾಣ ಒಬಿಸಿ ಮತ್ತು ಶೋಷಿತ ಸಮುದಾಯಗಳಲ್ಲಿ ಇರುವುದಕ್ಕಿಂತ ಹೆಚ್ಚು. ಮರ್ಯಾದೆಗೇಡು ಹತ್ಯೆ ಪ್ರಮಾಣ ಅವಕ್ಕಿಂತ ಅತ್ಯಂತ ಕಡಿಮೆ. ಇಲ್ಲ ಅನ್ನುವಷ್ಟು ಕಡಿಮೆ).

ಬ್ರಾಹ್ಮಣರಿಗೆ ಜಾತಿ ಕಾರಣಕ್ಕೆ ಸಮಾಜದಲ್ಲಿ ತಲೆ ತಗ್ಗಿಸೋ ಪರಿಸ್ಥಿತಿ ಬರಲ್ಲ, ಅದರಿಂದಾಗಿ ಅವರು ಅಂತರ್ಜಾತಿ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಅನ್ನಬಹುದು. ಅದು ನಿಜವೂ ಇರಬಹುದು. ಆದರೆ, ಬ್ರಾಹ್ಮಣೇತರವಾದ ಇತರ ಪ್ರಬಲ ಜಾತಿಗಳವರಿಗೂ ಸಮಾಜದಲ್ಲಿ ಇಂಥ ಸಮಸ್ಯೆ ಎದುರಾಗೋದಿಲ್ಲ. ಆದ್ದರಿಂದ ಈ ಕಾರಣ ಕೊಡುವುದು ರೆಡಿಕ್ಯುಲಸ್. ಅವರು ಎದುರಿಸುವ ಸೋಕಾಲ್ಡ್ ಅವಮಾನ ತಮ್ಮ ಸರೀಕರಲ್ಲಿ ಮಾತ್ರ. ಅದರಲ್ಲೂ ಹಾಗೆ ಅವಮಾನ ಮಾಡುವವರು ನೀಚರಾಗಿದ್ದಲ್ಲಿ ಮಾತ್ರ. ಹಾಗೂ, ಈ ತಾಯಿ ತಂದೆಯರು ಅದಕ್ಕೆ ಮಹತ್ವ ಕೊಟ್ಟರೆ ಮಾತ್ರ.
ಇಷ್ಟಕ್ಕೂ ಯಾವ ಮಾನ ಯಾವ ಮರ್ಯಾದೆ ಮಣ್ಣು ಮುಕ್ಕೋದಕ್ಕೆ? ಮಕ್ಕಳ ಜೀವ - ಜೀವನಕ್ಕಿಂತ ಮುಖ್ಯವಾ ಅವು. ಮೊನ್ನೆ ಯಾರೋ ಬ್ರಾಹ್ಮಣ ಸ್ವಾಮಿಯೊಬ್ಬರು ಹೆಣ್ಣುಮಕ್ಕಳ ಅಂತರ್ಜಾತಿ ಮದುವೆಗಳನ್ನ ತಡೆಯಿರಿ ಅಂತ ಕರೆ ಕೊಟ್ಟರು. ಖುದ್ದು ಬ್ರಾಹ್ಮಣ ಸಮುದಾಯ ಅವರ ಮಾತಿಗೆ ಸೊಪ್ಪು ಹಾಕುವುದಿಲ್ಲ, ಆದ್ದರಿಂದ ಬಾಕಿ ಜಾತಿಗಳವರು ಅದನ್ನು ಕೇಳಿಸಿಕೊಳ್ಳಬೇಕಾಗಿಲ್ಲ.
ಎಲ್ಲ ಜಾತ್ಯಸ್ಥ ಬಂಧುಗಳೇ ದಯವಿಟ್ಟು ಬುದ್ಧಿ ಬಳಸಿ. ಬ್ರಾಹ್ಮಣರ ಮಾತು, ವ್ರತ ಕತೆಗಳಿಂದ ದೂರ ಇರಿ. ಹೇಳಬಾರದ್ದೆಲ್ಲ ಹೇಳಿ, ಬರೆಯಬಾರದ್ದೆಲ್ಲ ಬರೆದು ಅವರೇನೋ ಆರಾಮಾಗಿ ಇರ್ತಾರೆ. ಪಾಡು ಪಡುವುದು, ಅಪರಾಧಿಗಳಾಗುವುದು ನೀವು, ನಿಮ್ಮ ಕುಟುಂಬ. ಮಕ್ಕಳ ಮದುವೆಗೂ ನಿಮ್ಮ ಮಾನ ಮರ್ಯಾದೆಗೂ ಸಂಬಂಧ ಇಲ್ಲ ಅನ್ನುವಷ್ಟು ಕಾಮನ್ ಸೆನ್ಸ್ ಇಲ್ವಾ? ಅವುಗಳ ನಡುವೆ ಸಂಬಂಧ ಕಲ್ಪಿಸುವವರನ್ನು ಪ್ರಶ್ನಿಸುವ / ತಿರಸ್ಕರಿಸುವ ಗಟ್ಸ್ ಇಲ್ವಾ? ಆಶ್ಚರ್ಯ!
ಕರ್ನಾಟಕದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ
ಕರ್ನಾಟಕದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಬಿದಲೂರು ಗ್ರಾಮದಲ್ಲಿ ಈಚೆಗೆ ಮರ್ಯಾದೆಗೇಡು ಹತ್ಯೆ ಆಗಿದೆ. ಅನ್ಯ ಜಾತಿಯ ಯುವಕನನ್ನು ಮಗಳು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಮಗಳನ್ನೇ ತಂದೆ ಕೊಂದಿರುವ ಘಟನೆ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಮಾನವೀಯ ಮರ್ಯಾದೆಗೇಡು ಹತ್ಯೆಗೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಕೇವಲ ಕಾನೂನಿನ ಮೂಲಕ ಮಾತ್ರ ಈ ಸಮಸ್ಯೆ ಪರಿಹಾರ ಸಾಧ್ಯವೇ ಎನ್ನುವ ಚರ್ಚೆಯೂ ನಡೆದಿದೆ.












Click it and Unblock the Notifications