ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ: ಪ್ರಕಾಶ್ ಜಾವಡೇಕರ್
ಉಡುಪಿ, ಜನವರಿ 24: ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಮಾವನ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಜಾವಡೇಕರ್, ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಯವರನ್ನು ಮರಳುಗಾರಿಕೆ ಮಟ್ಟಹಾಕಿದ್ದಕ್ಕಾಗಿ ವರ್ಗಾವಣೆ ಮಾಡಲಾಯಿತು. ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಅನಗತ್ಯವಾಗಿ ವರ್ಗಾವಣೆ ಮಾಡಲಾಯಿತು ಎಂದು ಅವರು ಅರೋಪಿಸಿದರು.
"ರಾಜ್ಯ ಸರಕಾರದ ಈ ನಿರ್ಧಾರ ಗಳಿಗೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಅವರು ಹೇಳಿದರು. "ಅಧಿಕಾರಿಗಳ ವರ್ಗಾವಣೆ ಮಾಡಿರುವ ರಾಜ್ಯ ಸರಕಾರ ಚುನಾವಣಾ ಆಯೋಗದ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ," ಎಂದು ಅವರು ಆರೋಪಿಸಿದರು.

ಮಹಾದಾಯಿ ನ್ಯಾಯಾಲಯದಲ್ಲಿದೆ
ಮಹಾದಾಯಿ ವಿಚಾರ ಪ್ರಸ್ತಾಪಿಸಿದ ಜಾವಡೇಕರ್, "ಮಹಾದಾಯಿ ವಿವಾದ ನ್ಯಾಯಾಲಯದಲ್ಲಿದೆ. ಈ ಹಿಂದೆ ಆಡಳಿತದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೋರ್ಟ್ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ತುಟಿ ಪಿಟಿಕ್ ಅಂದಿಲ್ಲ. ಆದರೆ ಈಗ ಏರು ಧ್ವನಿಯಲ್ಲಿ ಮಾತನಾಡುತ್ತಾರೆ," ಎಂದು ಅವರು ಟೀಕಿಸಿದರು.

ನಾವು ಪರಿಕ್ಕರ್ ಮನವೊಲಿಸುತ್ತೇವೆ
"ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕಕ್ಕೆ ಕುಡಿಯುವ ನೀರು ಕೊಡುತ್ತೇವೆ ಅಂತ ಹೇಳಿದರು. ಆದರೆ ಅವರಿಗೆ ವಂದನೆ ಹೇಳುವ ಬದಲು ರಾಜ್ಯ ಸರಕಾರ ಬಂದ್ ಮಾಡಿಸುತ್ತಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಹಾದಾಯಿ ವಿಚಾರದಲ್ಲಿ ಗೋವಾ ವಿಪಕ್ಷ ನಾಯಕರ ಮನವೊಲಿಸಿ ಎಂದು ಕಾಂಗ್ರೆಸ್ ಗೆ ಕರೆನೀಡಿದ ಅವರು, ನಾವು ಪರಿಕ್ಕರ್ ಮನವೊಲಿಸ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಭ್ರಷ್ಟ
ಇದು ಮಹತ್ವದ ಚುನಾವಣೆ. ನೂರು ದಿನಗಳ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ಹೇಳಿದ ಅವರು, "ಇದು ಎರಡು ಸಂಸ್ಕೃತಿಗಳ ಸಂಘರ್ಷ. ಸಿದ್ದರಾಮಯ್ಯ ಅಹಿಂದ ಅಂದಿದ್ದರು. ಆದರೆ ಭ್ರಷ್ಟಾಚಾರ ಬಿಟ್ಟು ಏನೂ ಮಾಡಿಲ್ಲ," ಎಂದು ದೂರಿದರು.

ಭಯೋತ್ಪಾದಕರ ಜತೆ ಕೈ ಜೋಡಣೆ
ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗುತ್ತಿದೆ. ಆದರೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಿಎಫ್ಐ ಸಂಘಟನೆ ಮೇಲಿನ ಕೇಸು ವಾಪಾಸು ಪಡೆಯುತ್ತಿದೆ. ರಾಜ್ಯ ಸರ್ಕಾರ ಭಯೋತ್ಪಾದಕರ ಜತೆ ಕೈಜೋಡಿಸಿದೆ ಎಂದು ಅವರು ಕಿಡಿಕಾರಿದರು. "ರಾಜ್ಯ ಸರಕಾರ ಟಿಪ್ಪು ಜಯಂತಿ ಮಾಡುತ್ತದೆ. ಆದರೆ ಸ್ವಾಮಿ ವಿವೇಕಾನಂದರ ಜಯಂತಿ ಯಾಕೆ ಮಾಡಲ್ಲ?" ಎಂದು ಅವರು ಪ್ರಶ್ನಿಸಿದರು.

ರಾಹುಲ್ ಗಾಂಧಿ ಟೆಂಪಲ್ ರನ್
"ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡಿದರೂ ಕೃಷ್ಣಮಠಕ್ಕೆ ಬರಲಿಲ್ಲ. ಆದರೆ ಈಗ ರಾಹುಲ್ ಗಾಂಧಿ ಮಠಕ್ಕೆ ಬರ್ತಾರಂತೆ," ಎಂದು ವ್ಯಂಗ್ಯವಾಡಿದದರು. ಜನರಿಗೆ ಭಕ್ತಿಗೂ, ರಾಜಕೀಯಕ್ಕೂ ವ್ಯತ್ಯಾಸ ಗೊತ್ತು ಎಂದು ಪ್ರಕಾಶ್ ಜಾವಡೇಕರ್ ಹೇಳಿದರು. ನಿಜ ಭಕ್ತರು ಯಾರು ಅಂತ ದೇವರಿಗೂ ಚೆನ್ನಾಗಿ ಗೊತ್ತು. ಗುಜರಾತ್ ನಲ್ಲಿ ಟೆಂಪಲ್ ರನ್ ರಾಹುಲ್ ಗಾಂಧಿ ಕೈ ಹಿಡಿಯಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೂ ಹಿಂದೂ ಅಂತಾರೆ. ಆದರೆ ಅವರಿಗೆ ಚುನಾವಣೆ ಬಂದಾಗ ಮಾತ್ರ ದೇವಾಲಯ ನೆನಪಾಗುತ್ತದೆ ಎಂದು ಛಾಟಿ ಬೀಸಿದರು.












Click it and Unblock the Notifications