Hit & Run; ಪರಿಹಾರ ನೀಡಲು ಜಿಲ್ಲಾ ಮಟ್ಟದ ಸಮಿತಿ ರಚನೆ
ಬೆಂಗಳೂರು, ಜೂನ್ 26; ಕರ್ನಾಟಕದ ಸಾರಿಗೆ ಇಲಾಖೆ HIT & Run ಅಪಘಾತಗಳಲ್ಲಿ ಮರಣ ಹೊಂದಿದವರಿಗೆ ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಲು ಜಿಲ್ಲಾ ಸಮಿತಿ ರಚಿಸುವ ಕುರಿತು ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ. ಎಸ್. ಈ ಕುರಿತು ಆದೇಶ ಹೊರಡಿಸಿದ್ದಾರೆ. ಆಯುಕ್ತರು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಇವರ ಪತ್ರ ದಿನಾಂಕ 07/06/2023 ಉಲ್ಲೇಖಿಸಿದ್ದಾರೆ.

ಆಯುಕ್ತರು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಇವರ ಪತ್ರದಲ್ಲಿ, ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ದಿನಾಂಕ 25/02/2022ರ ಅಧಿಸೂಚನೆಯಲ್ಲಿ "compensation to victims of Hit and Run Motor Accidents Scheme" ಅನ್ನು ಪ್ರಕಟಿಸಲಾಗಿರುತ್ತದೆ. ಇದು ದಿನಾಂಕ 01/04/2022 ರಿಂದ ಜಾರಿಗೆ ಬಂದಿದೆ.
ಈ ಯೋಜನೆಯಡಿ ಹಿಟ್ & ರನ್ ಅಪಾಘತದಲ್ಲಿ ಮರಣ ಹೊಂದಿದ ವಾರಸುದಾರರಿಗೆ 2 ಲಕ್ಷ ರೂ.ಗಳು ಹಾಗೂ ಗಾಯಗೊಂಡವರಿಗೆ 50,000 ರೂ.ಗಳನ್ನು ಪರಿಹಾರವಾಗಿ ನೀಡಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ compensation to victims of Hit and Run Motor Accidents Scheme ಅನುಷ್ಠಾನಗೊಳಿಸಲು ಹಾಗೂ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಧಿಕಾರಿ/ ಸದಸ್ಯರುಗಳ ಪಟ್ಟಿಯೊಂದಿಗೆ ಸದರಿ ಸಮಿತಿಯನ್ನು ರಚಿಸುವಂತೆ ಕೋರಲಾಗಿದೆ. ಆಯುಕ್ತರು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, compensation to victims of Hit and Run Motor Accidents Scheme ಅನ್ನು ಅನುಷ್ಠಾನಗೊಳಿಸಲು ಹಾಗೂ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಮಿತಿಯನ್ನು ಈ ಕೆಳಕಂಡಂತೆ ರಚಿಸಿ ಆದೇಶಿಸಲಾಗಿದೆ.
ಜಿಲ್ಲಾ ಮಟ್ಟದ ಸಮಿತಿ; ಜಿಲ್ಲಾಧಿಕಾರಿಗಳು ಈ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಉಪ ವಿಭಾಗಾಧಿಕಾರಿಗಳು/ ತಹಶೀಲ್ದಾರ್ ಸದಸ್ಯರಾಗಿರುತ್ತಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು/ ಪೊಲೀಸ್ ಉಪಾಧೀಕ್ಷಕರು ಸದಸ್ಯರು. ಉಳಿದಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಸ್ತೆ ಸುರಕ್ಷತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸ್ವಯಂ ಸೇವಾ ಸಂಸ್ಥೆಯ ಸದಸ್ಯ (ಜಿಲ್ಲಾಧಿಕಾರಿ ನಿರ್ಣಯಿಸಿದಂತೆ) ಸದಸ್ಯರು. ನಾಮ ನಿರ್ದೇಶನ ಮಾಡಿದ ಅಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಸದರಿ ಸಮಿತಿಯು ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ಅಧಿಸೂಚನೆ ದಿನಾಂಕ 25/2/2022ರ ಅಧಿಸೂಚನೆಯ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರದಿಂದ ಸೂಚನೆ; ಹಲವು ಗಂಭೀರ ರಸ್ತೆ ಅಪಘಾತಗಳು ಸಂಭವಿಸಿದಾಗ ರಾಜ್ಯ, ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಆದರೆ ಹಿಟ್ & ರನ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿರಲಿಲ್ಲ. ಆದ್ದರಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಿಟ್ & ರನ್ ಮೋಟಾರು ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಹೊಸ ಯೋಜನೆಯನ್ನು ಪ್ರಕಟಿಸಿತ್ತು.
25 ಫೆಬ್ರವರಿ 2022ರ ಅಧಿಸೂಚನೆಯ ಮೂಲಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ಪಾವತಿಯ ಬಿಡುಗಡೆಯನ್ನು ಸಹ ಕಾಲಮಿತಿಯಲ್ಲಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಸಚಿವಾಲಯವು ಮೋಟಾರು ವಾಹನ ಅಪಘಾತ ನಿಧಿಯ ರಚನೆ, ಕಾರ್ಯಾಚರಣೆ, ನಿಧಿಯ ಮೂಲಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪ್ರಕಟಿಸಿತ್ತು. ಈ ನಿಧಿಯನ್ನು ಹಿಟ್ & ರನ್ ಅಪಘಾತದ ಸಂದರ್ಭದಲ್ಲಿ ಪರಿಹಾರವನ್ನು ಒದಗಿಸಲು, ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಮತ್ತು ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ಉದ್ದೇಶಕ್ಕಾಗಿ ಬಳಸಲಾಗುತ್ತದೆ.












Click it and Unblock the Notifications