CRPF ಪರೀಕ್ಷೆಯಲ್ಲಿ ಹಿಂದಿ ಕಡ್ಡಾಯ, ಕನ್ನಡಕ್ಕಿಲ್ಲ ಮಣೆ: ತಕ್ಷಣವೇ ಅನ್ಯಾಯ ಸರಿಪಡಿಸುವಂತೆ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಏಪ್ರಿಲ್ 10: ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಸಡಿಲಿಸಿ, ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, 'ಭಾಷೆಯೇ ಜ್ಞಾನ ಅಲ್ಲ, ಅದು ಜ್ಞಾನದ ಸಂವಹನ ಸಾಧನ ಅಷ್ಟೆ. ಕನ್ನಡ ಭಾಷಾ ಮಾಧ್ಯಮದಲ್ಲಿ ಓದಿದ ನಮ್ಮ ಯುವಜನರು ಜ್ಞಾನಿಗಳಾಗಿದ್ದರೂ ಭಾಷೆಯ ಸಮಸ್ಯೆಯಿಂದಾಗಿ ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದು ಅನ್ಯಾಯ' ಎಂದು ಹೇಳಿದ್ದಾರೆ.

'ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಭಾಷಾ ನೀತಿಯಿಂದಾಗಿ ಕೇಂದ್ರದಲ್ಲಿ ಕನ್ನಡಿಗ ಯುವಜನರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ, ಯುವಜನರ ಭವಿಷ್ಯ ಮಂಕಾಗುತ್ತಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
'ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ' ಎಂದೂ ಅವರು ಹೇಳಿದ್ದಾರೆ.
'ಈಗಲೂ ಕಾಲ ಮಿಂಚಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಸಿಆರ್‌ಪಿಎಫ್ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ರಾಜ್ಯ ಭಾಷೆಗಳಲ್ಲಿ ಬರೆಯಲು ಅನುಕೂಲ ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಬಿಜೆಪಿ ಸಂಸದರು ಇದಕ್ಕಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಸರಣಿ ಟ್ವೀಟ್
ಕೇಂದ್ರ ಬಿಜೆಪಿ ಸರಕಾರ ಮತ್ತೆ ಕನ್ನಡಿಗರಿಗೆ ಉಂಡೆನಾಮ ಹಾಕಿದೆ. ಭಾನುವಾರ ನಡೆದ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ನೇಮಕದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ, ಇಂಗ್ಲಿಷ್ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ಇದು ಖಂಡನೀಯ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
'9212 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ದುರಂತವೆಂದರೆ, ಇಷ್ಟು ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಹಿಂದಿ,ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆದಿದ್ದಾರೆ, ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಬರೆಯುವುದನ್ನು ನಿರಾಕರಿಸುವುದು ಎಂದರೆ ಸಂವಿಧಾನಕ್ಕೆ ಎಸಗಿದ ಅಪಚಾರ' ಎಂದು ಎಚ್‌ಡಿಕೆ ಹೇಳಿದ್ದಾರೆ.
'ಕೇಂದ್ರ ಸರಕಾರ ತನ್ನ ಸುಪರ್ದಿಯಲ್ಲಿ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷಿನಲ್ಲೇ ನಡೆಸುತ್ತಿದೆ. ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆ ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶ. ಇದು ಸ್ಪಷ್ಟ' ಎಂದು ಅವರು ಹೇಳಿದ್ದಾರೆ.
'ತಮ್ಮ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಅನ್ಯಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾದ ಕರ್ಮ ದಕ್ಷಿಣ ಭಾರತ ರಾಜ್ಯಗಳ ಜನರದ್ದು. ಕನ್ನಡಿಗರೂ ಸೇರಿ ದಕ್ಷಿಣದ ಎಲ್ಲ ಭಾಷಿಕರು ಈ ಬಗ್ಗೆ ವಿರೋಧ ಮಾಡುತ್ತಲೇ ಇದ್ದರೂ ಕೇಂದ್ರ ಸರಕಾರ ಹಿಂದಿ ಹೇರಿಕೆಯನ್ನು ಮುಂದುವರಿಸಿದೆ' ಎಂದು ಎಚ್‌ಡಿಕೆ ಆರೋಪಿಸಿದ್ದಾರೆ.
'ಮುಲಾಜಿಲ್ಲದೆ ಸಿಆರ್ ಪಿಎಫ್ ನೇಮಕಾತಿಯ ಮರು ಪರೀಕ್ಷೆ ನಡೆಸಬೇಕು ಹಾಗೂ ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿ ಆದೀತು' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.












Click it and Unblock the Notifications