Hindi Imposition: ಹಿಂದಿ ಏರಿಕೆ ವಿರುದ್ಧ ಕರ್ನಾಟಕದಾದ್ಯಂತ ಪ್ರತಿಭಟನೆ!
ಚಿಕ್ಕಮಗಳೂರು ಸೆಪ್ಟೆಂಬರ್ 14: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಕನ್ನಡ ಸೇನೆ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ಖಂಡಿಸಿ ಚಿಕ್ಕಮಗಳೂರು ನಗರದ ಕೇಂದ್ರ ಅಂಚೆ ಕಛೇರಿ ಬಳಿ ಕನ್ನಡ ಸೇನೆ ಸಂಘಟನೆಯ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ.
ಕೂಡಲೆ ಹಿಂದಿ ಭಾಷೆ ಏರಿಕೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಮತ್ತಷ್ಟು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ. ಬಲವಂತದ ಹಿಂದಿ ಏರಿಕೆಯಿಂದ ಕನ್ನಡ ಭಾಷೆ ಕಡಗಣನೆಯಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಮಾಡುವುದಾಗಿ ಕಾರ್ಯಕರ್ತರು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಈ ವೇಳೆ ಸುಮಾರು ಐವತ್ತಕ್ಕೂ ಹೆಚ್ಚು ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಯಿಯಾಗಿದ್ದರು.

ಹಿಂದಿ ದಿವಸ್ ಆಚರಣೆ ವಿರುದ್ಧ ಕರವೇ ಪ್ರತಿಭಟನೆ
ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಚಾಮರಾಜನಗರ ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಐಬಿ ವೃತ್ತದಿಂದ ಸಾರಿಗೆ ಬಸ್ ನಿಲ್ದಾಣಸ ತನಕ ಪ್ರತಿಭಟನ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಬಳಿಕ ಹಳೇ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುವ ನಡೆ ಸರಿಯಲ್ಲ. ಭಾರತ ಎಂದರೆ ಅನೇಕ ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ, ಆಚಾರ ವಿಚಾರ ಒಳಗೊಂಡಿದ್ದು, ಹಿಂದಿ ಭಾಷಿಕರ ದೇಶವಲ್ಲ. ಕನ್ನಡಿಗರ ಮೇಲೆ, ತಮಿಳರು, ಮಲೆಯಾಳಿಗಳು, ತೆಲುಗು ಭಾಷಿಕರ ಮೇಲೆ ಉತ್ತರ ಭಾರತದ ಕೆಲವೇ ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೆ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ನಮ್ಮ ಮೇಲೆ ಪ್ರತಿ ಹಂತದಲ್ಲಿಯೂ ಹಿಂದಿ ಹೇರುವ ಮೂಲಕ ಒತ್ತಡ ಹೇರುತ್ತಿದೆ. ಹಿಂದಿ ಬಾರದವರಿಗೆ ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಕಡೆಗಣಿಸಲಾಗುತ್ತಿದೆ, ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಆಯಾ ಸ್ಥಳೀಯ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಕರವೇ ಪ್ರತಿಭಟನೆ
ಕರವೇಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ ನೇತೃತ್ವದಲ್ಲಿ ಹಿಂದಿ ದಿವಸ್ ಅನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಿದರು. ಭಾರತದಲ್ಲಿ 22 ಆಡಾಳಿತಾತ್ಮಕ ಭಾಷೆಗಳು ಇವೆ. ಎಲ್ಲ ಭಾಷೆಗಳನ್ನು ಮಾತನಾಡುವುದರಿಂದ ಭಾರತ ದೇಶವಾಗಿದೆ. ಅಂತಹ ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ದೇಶದ ಹಲವು ಉದ್ಯೋಗಗಳ ಪರಿಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ ಹಿಂದಿ ದಿವಸ್ ಮೂಲಕ ನಮ್ಮ ಮೇಲೆ ಹೇರಿಕೆ ನಡೆಸುತ್ತಿದ್ದಾರೆ. ಬಲವಂತವಾಗಿ ಹೇರಿಕೆ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಾ. ಹೀಗಾಗಿ ಇಂದು ಹಿಂದಿ ಕಾರ್ಯಕ್ರಮವನ್ನು ಧಿಕ್ಕರಿಸಿ ನಾವು ಕಪ್ಪು ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕರವೇ ನಾರಾಯಣ ಗೌಡ ಆಕ್ರೋಶ ಹೊರಹಾಕಿದರು.
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆಪ್ಟೆಂಬರ್ 14 ರಂದು ಎಲ್ಲಾ ರಾಜ್ಯಗಳಲ್ಲಿ ಹಿಂದಿ ದಿವಸ್ ಆಚರಿಸಲು ಹೊರಟಿದೆ. ದೇಶದಾದ್ಯಂತ ಹಿಂದಿ ದಿವಸ್, ಹಿಂದಿ ಸಪ್ತಾಹ ಆಚರಿಸಲು ಹೊರಟಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಅರಿವೇ ಇಲ್ಲ. ಕೋಟಿ ಕೋಟಿ ಖರ್ಚು ಮಾಡಿ ಹಿಂದಿಯನ್ನು ವೈಭವೀಕರಿಸಲಾಗುತ್ತಿದೆ.












Click it and Unblock the Notifications