Government Employee: ತುಟ್ಟಿಭತ್ಯೆ ಏರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಪತ್ರ
ಬೆಂಗಳೂರು, ಏಪ್ರಿಲ್ 03: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 1/1/2025 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರದ ಹೆಚ್ಚುವರಿ ಕಂತಿನ ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು. ಈ ಕುರಿತು ಅಧಿಕೃತ ಆದೇಶ ಸಹ ಪ್ರಕಟವಾಗಿದೆ. ಈಗ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರು ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಿ ಎಂದು ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಪತ್ರವನ್ನು ಬರೆದಿದ್ದಾರೆ. ಕೇಂದ್ರ ಸರ್ಕಾರದ ಡಿಎ ಹೆಚ್ಚಳದ ಆದೇಶವನ್ನು ಉಲ್ಲೇಖ ಮಾಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಈ ಪತ್ರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 1/1/2025ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರಗಳು: ಸಿ. ಎಸ್. ಷಡಾಕ್ಷರಿ ಅವರು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಈ ಹಿಂದಿನಿಂದಲೂ ಮಂಜೂರು ಮಾಡಿರುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 1/1/2025ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 2ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುತ್ತದೆ. ಈ ಕುರಿತ ಆದೇಶದ ಪ್ರತಿಯನ್ನು ಸಹ ಲಗತ್ತಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 1/1/2025 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 2ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮಾರ್ಚ್ 28ರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜನವರಿ 1, 2025 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡಲು ಅನುಮೋದನೆ ನೀಡಲಾಗಿತ್ತು. ಕೇಂದ್ರ ಸರ್ಕಾರ ತುಟ್ಟಿಭತ್ಯೆ ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರ ಡಿಎ ಏರಿಕೆ ಮಾಡುತ್ತದೆ.
ಕೇಂದ್ರ ಸರ್ಕಾರದ ತೀರ್ಮಾನದಿಂದ 48.66 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 66.55 ಲಕ್ಷ ಪಿಂಚಣಿದಾರರು ಮೂಲ ವೇತನ ಅಥವ ಪಿಂಚಣಿಯಲ್ಲಿ ಅಸ್ತಿತ್ವದಲ್ಲಿರುವ ಶೇ 53 ದರಕ್ಕಿಂತ ಶೇ 2ರ ಹೆಚ್ಚಳವನ್ನು ಪಡೆಯಲಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 6,614 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಹ ಡಿಎ ಹೆಚ್ಚಳ ವಿಚಾರದಲ್ಲಿ ಈಗಿರುವ ನಿಯಮ ಪಾಲನೆ ಮಾಡುವುದು ಉತ್ತಮ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ಡಿಎ ಏರಿಕೆ ಮಾಡುವ ಸಂಪ್ರದಾಯವನ್ನು ಸದ್ಯ ಪಾಲನೆ ಮಾಡುತ್ತಿದೆ.












Click it and Unblock the Notifications