ನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಡಿಸೆಂಬರ್ 12: ಬಿಡಿದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ರಾಮನಗರ ನ್ಯಾಯಾಲಯಲ್ಲಿ ನಡೆಯುತ್ತಿದೆ.
ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ವಿರುದ್ಧ ಲೆನಿನ್ ಅತ್ಯಾಚಾರದ ದೂರು ಸಲ್ಲಿಸಿದ್ದರು. ರಾಮನಗರ ಸೆಷನ್ಸ್ ಕೋರ್ಟ್‌ನಲ್ಲಿ ಇದರ ವಿಚಾರಣೆ ನಡೆಯುತ್ತಿತ್ತು. ಸೆಷನ್ಸ್ ಕೋರ್ಟ್‌ನಲ್ಲಿ ಸೂಕ್ತವಾಗಿ ವಿಚಾರಣೆ ನಡೆಯುತ್ತಿಲ್ಲ ಎಂದು ಲೆನಿನ್ ಅರ್ಜಿ ಸಲ್ಲಿಸಿದ್ದರು.
ರಾಮನಗರ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಲೆನಿನ್ ಅರ್ಜಿ ಹಾಕಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಗೆ ತಡೆ ನೀಡಿದೆ.

ಅತ್ಯಾಚಾರ ಪ್ರಕರಣದಲ್ಲಿ ರಾಮನಗರದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿರುವ ನ್ಯಾಯಾಲಯ ರಾಮನಗರ ಸೆಷನ್ಸ್ ಕೋರ್ಟ್‌ನಲ್ಲಿರುವ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ.
ಕೆಲವು ದಿನಗಳ ಹಿಂದೆ ರಾಮನಗರ ನ್ಯಾಯಾಲಯ ಅತ್ಯಾಚಾರ ಪ್ರಕರಣದ ವಿಚಾರಣೆಗೆ ನಿತ್ಯಾನಂದ ಸ್ವಾಮಿ ಖುದ್ದಾಗಿ ಹಾಜರಾಗಬೇಕಾದ ಅವಶ್ಯಕತೆ ಇಲ್ಲ. ಗೈರು ಹಾಜರಿಯಲ್ಲಿ ವಿಚಾರಣೆ ಮುಂದುವರೆಸಬಹುದು ಎಂದು ಹೇಳಿತ್ತು. ಈಗ ವಿಚಾರಣೆಗೆ ತಡೆ ನೀಡಲಾಗಿದೆ.
ಸ್ವಾಮಿ ನಿತ್ಯಾನಂದ ಮತ್ತು ಅವರ ಐವರು ಶಿಷ್ಯಂದಿರ ವಿರುದ್ಧ ರಾಮನಗರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಿತ್ಯಾನಂದ ಸ್ವಾಮಿ ಹಲವು ಬಾರಿ ವಿಚಾರಣೆಗೆ ಗೈರಾಗಿದ್ದರು.












Click it and Unblock the Notifications