ಧ್ವನಿವರ್ಧಕದಲ್ಲಿ ಆಜಾನ್: ಇತರ ಧರ್ಮೀಯರ ಭಾವನೆಗೆ ಧಕ್ಕೆ ಇಲ್ಲ ಎಂದ ಹೈಕೋರ್ಟ್
ಬೆಂಗಳೂರು, ಆಗಸ್ಟ್ 22: ಧ್ವನಿವರ್ಧಕಗಳಿಂದ ಆಜಾನ್ ಕೂಗುವುದನ್ನು ನಿಲ್ಲಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯೊಂದನ್ನು ರಾಜ್ಯ ಹೈಕೋರ್ಟ್ ವಜಾ ಮಾಡಿದೆ. ಬೈರವೇಶ್ವರನಗರದ ನಿವಾಸಿಯೊಬ್ಬರು ಸಲ್ಲಿಸಿದ ಪಿಐಎಲ್ ಇದಾಗಿತ್ತು.
ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗಲಾಗುತ್ತದೆ. ಇದು ವರ್ಷವಿಡೀ ನಿತ್ಯ ನಡೆಯುತ್ತದೆ. ಇದರಿಂದ ಇತರ ಧಾರ್ಮಿಕರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಹೈಕೋರ್ಟ್ ಮುಖ್ಯನ್ಯಾಯಾಧೀಶ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ, ಆಜಾನ್‌ನಿಂದ ಬೇರೆ ಧಾರ್ಮಿಕರ ಭಾವನೆಗಳಿಗೆ ಧಕ್ಕೆಯಾಗುತ್ತದೆಂಬ ವಾದವನ್ನು ಒಪ್ಪಲಿಲ್ಲ.

"ಅರ್ಜಿದಾರರಾಗಲೀ ಅಥವಾ ಯಾವುದೇ ಧರ್ಮದವರಾಗಲೀ ಅವರ ಆಚರಣೆ ಮಾಡುವ ಹಕ್ಕು ಹೊಂದಿರುತ್ತಾರೆ. ಆದರೆ ಆಜಾನ್ ಎಂಬುದು ಮುಸ್ಲಿಮರ ಪ್ರಾರ್ಥನೆಯಾಗಿದೆ. ಇಸ್ಲಾಮ್‌ನಲ್ಲಿ ಆಜಾನ್ ಅಗತ್ಯ ಆಚರಣೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಅದರೆ, ಬೇರೆ ಧರ್ಮಗಳ ಜನರ ನಂಬಿಕೆಗೆ ಮತ್ತು ಹಕ್ಕಿಗೆ ಆಜಾನ್‌ನಿಂದ ಧಕ್ಕೆ ಆಗುತ್ತದೆ ಎಂಬ ವಾದವನ್ನು ಒಪ್ಪಲು ಸಾಧ್ಯ ಇಲ್ಲ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸಹಿಷ್ಣತೆಯ ಪಾಠ:
ಭಾರತೀಯ ನಾಗರಿಕತೆಯಲ್ಲಿ ಸಹಿಷ್ಣುತೆಯ ಸ್ವಭಾವ ಅಡಕವಾಗಿದೆ. ಸಂವಿಧಾನದ ಆರ್ಟಿಕಲ್ 25 ಮತ್ತು 26ರಲ್ಲಿ ಸಹಿಷ್ಣುತೆಗೆ ಒತ್ತುಕೊಡಲಾಗಿದೆ. ಆರ್ಟಿಕಲ್ 25(1)ರ ಪ್ರಕಾರ ಯಾವುದೇ ಪ್ರಜೆ ತನ್ನ ಧರ್ಮದ ಆಚರಣೆಯನ್ನು ಮತ್ತು ಪ್ರಚಾರವನ್ನು ಮುಕ್ತವಾಗಿ ಮಾಡುವ ಮೂಲಭೂತ ಹಕ್ಕು ಹೊಂದಿರುತ್ತಾರೆ. ಹೈಕೋರ್ಟ್ ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ಈ ವಿಚಾರವನ್ನು ಉಲ್ಲೇಖಿಸಿ ಅರ್ಜಿದಾರರಿಗೆ ತಿಳಿಹೇಳಿತು.

"ಆರ್ಟಿಕಲ್ 25(1) ಧಾರ್ಮಿಕ ಆಚರಣೆಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದೆಯಾದರೂ ಅದು ಸಂಪೂರ್ಣ ಸ್ವಾತಂತ್ರ್ಯ ಅಥವಾ ಹಕ್ಕು ಆಗುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ, ಸಂವಿಧಾನದಲ್ಲಿ ಇತರರಿಗೆ ನೀಡಿರುವ ಹಕ್ಕುಗಳಿಗೆ ಅನುಗುಣವಾಗಿ ನಿರ್ಬಂಧಗಳಿಗೆ ಅದು ಒಳಪಟ್ಟಿರುತ್ತದೆ" ಎಂದು ಕೋರ್ಟ್ ತಿಳಿಸಿತು.
ಲೌಡ್ ಸ್ಪೀಕರ್ ಪರಿಶೀಲನೆಗೆ ಆದೇಶ
ಇದೇ ವೇಳೆ, ಆಜಾನ್‌ನಿಂದ ಶಬ್ದಮಾಲಿನ್ಯ ಆಗುತ್ತದೆ ಎಂಬ ವಿಚಾರವನ್ನು ಪರಿಗಣಿಸಿದ ನ್ಯಾಯಾಲಯ, ಶಬ್ದಮಾಲಿನ್ಯ ನಿಯಮಾವಳಿ ಅಡಿಯಲ್ಲಿ ಯಾವುದಾದರೂ ನಿಯಮ ಉಲ್ಲಂಘನೆ ಆಗಿದೆಯಾ ಎಂಬುದನ್ನು ಪರಿಶೀಲಿಸಿ ಎಂಟು ವಾರದೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಆಜಾನ್ ಪ್ರಾರ್ಥನೆ ನಡೆಯುತ್ತದೆ. ಬಹುತೇಕ ಕಡೆ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆ. ಧ್ವನಿವರ್ಧಕಗಳು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಶಬ್ದ ಹೊರಡಿಸುವಂತಿಲ್ಲ ಎಂಬ ನಿಯಮ ಇದೆ. ಬಹುತೇಕ ಆಜಾನ್‌ನಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಲೌಡ್ ಸ್ಪೀಕರ್‌ಗಳು ಬಹಳ ದೊಡ ಶಬ್ದ ಹೊರಡಿಸುತ್ತವೆ ಎಂಬುದು ಆರೋಪ. ಇತ್ತೀಚೆಗೆ ಪೊಲೀಸರು ಅನೇಕ ಮಸೀದಿಗಳಿಗೆ ಹೋಗಿ ಧ್ವನಿವರ್ಧಕಗಳ ಪರಿಶೀಲನೆ ನಡೆಸಿದ್ದರು.
ಅರ್ಜಿದಾರರಿಗೆ ತಿವಿದ ಕೋರ್ಟ್
ಆಜಾನ್ ಕೂಗುವುದು ಮುಸ್ಲಿಮರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದರೂ, ಅದರಲ್ಲಿ ಬಳಸುವ ಅಲ್ಲಾಹು ಅಕ್ಬರ್ (ಅಲ್ಲಾನೇ ಸರ್ವಶ್ರೇಷ್ಠ) ಎಂಬ ಶಬ್ದ ಇತರರ ಧಾರ್ಮಿಕ ನಂಬಿಕಗಳಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯಾದ್ಯಂತ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಆಜಾನ್ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಜಾನ್‌ನಲ್ಲಿರುವ ಶಬ್ದಗಳನ್ನು ಓದಲು ಮುಂದಾದರು. ಅದಕ್ಕೆ ತಡೆಯೊಡ್ಡಿದ ನ್ಯಾಯಪೀಠ, ಆಜಾನ್‌ನಲ್ಲಿರುವ ಶಬ್ದಗಳನ್ನು ಕೇಳಿದರೆ ನಿಮ್ಮ ಮೂಲಭೂತಹಕ್ಕು ಮೊಟುಕಗೊಳ್ಳುತ್ತದೆ ಎಂದು ನೀವೇ ಹೇಳುತ್ತಿದ್ದೀರಿ. ಇದೀಗ ಅದನ್ನು ಓದುವ ಮೂಲಕ ನೀವೇ ನಿಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿಕೊಳ್ಳಬೇಡಿ ಎಂದು ಮೌಖಿಕವಾಗಿ ನುಡಿಯಿತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications