ಕೆಪಿಟಿಸಿಎಲ್ ನೌಕರರ ಸಂಘದ ಚುನಾವಣೆಗೆ ಹೈಕೋರ್ಟ್ ಅಸ್ತು
ಬೆಂಗಳೂರು, ಮೇ 23: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನೌಕರರ ಸಂಘದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ಅಸ್ತು ಎಂದಿದೆ. ಪದಾಧಿಕಾರಿಗಳ ಆಯ್ಕೆಗೆ ಇದೇ ಮೇ 23ರಂದು ನಿಗದಿಯಾಗಿರುವ ಚುನಾವಣೆಗೆ ತಡೆ ನೀಡಲು ನಿರಾಕರಿಸಿರುವ ನ್ಯಾಯಾಲಯ ನಿಗದಿಯಂತೆ ಚುನಾವಣೆ ನಡೆಸಲು ಸಮ್ಮತಿ ನೀಡಿದೆ. ಹಾಗಾಗಿ ಚುನಾವಣೆ ನಡೆಯಲಿದ್ದು, ಹೊಸ ಪದಾಧಿಕಾರಿಗಳ ಆಯ್ಕೆ ಸುಗಮವಾಗಲಿದೆ.
ಆರ್. ಮುರಳೀಧರ ಸೇರಿದಂತೆ ಸಂಘದ 10 ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಸೂಕ್ತವಾಗಿ ಅನುಸರಿಸುತ್ತಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ಮಾಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚುನಾವಣೆ ನಡೆಸಲು ಅನುಮತಿ ನೀಡಿ ಮಧ್ಯಂತರ ಆದೇಶ ಮಾಡಿದೆ. ಅಲ್ಲದೆ, ಚುನಾವಣೆಯ ಫಲಿತಾಂಶವು ಅರ್ಜಿ ಕುರಿತು ಹೈಕೋರ್ಟ್ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ, ಅರ್ಜಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.
ಚುನಾವಣೆ ನಂತರ ಪಶ್ನೆ: ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ಒಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ನಂತರ ಆ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯಪ್ರವೇಶ/ ಹಸ್ತಕ್ಷೇಪ ಮಾಡಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ.
ಆದಾಗ್ಯೂ ಚುನಾವಣೆಗೆ ಸಂಬಂಧಿಸಿದ ಯಾವುದೇ ನಿಯಮಗಳು ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಅರ್ಜಿದಾರರಿಗೆ ಆಕ್ಷೇಪ ಇದ್ದಲ್ಲಿ ಮತ್ತು ಚುನಾವಣೆಯ ಕಾನೂನು ಬದ್ಧತೆಯನ್ನು ಚುನಾವಣೆಯ ಮುಗಿದ ನಂತರವೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿರುತ್ತದೆ. ಆದ್ದರಿಂದ ನಿಗದಿಯಂತೆ ನೌಕರರ ಸಂಘವು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಪರ ವಕೀಲರು, ಉದ್ದೇಶಿತ ಚನಾವಣೆಯನ್ನು ಯಾವುದೇ ಆಧಾರವಿಲ್ಲದ ನಡೆಸಲಾಗುತ್ತಿದೆ. ಚುನಾವಣೆ ನಡೆಸಲು ನೌಕರರ ಸಂಘ ಅನುಸರಿಸುತ್ತಿರುವ ನಿಯಮಗಳಿಗೆ ಸಂಬಂಧಿಸಿದ ದಾವೆಯು ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಸಂಘಕ್ಕೆ ಚುನಾವಣೆ ನಡೆಸುವುದಾದರೆ, ಚುನಾವಣಾ ಮಾದರಿ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರ ನಡೆಸಬೇಕು ಎಂದು 2024ರ ಫೆ.28ರಂದು ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿದೆ. ಹೀಗಿದ್ದರೂ ಚುನಾವಣೆಗೆ ಮೇ 18ರಂದು ವೇಳಾಪಟ್ಟಿ ಪ್ರಕಟಿಸಲಾಗಿದೆ ಮತ್ತು ಮೇ 23ರಂದು ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ವಾದವನ್ನು ಆಕ್ಷೇಪಿಸಿ ಕೆಪಿಟಿಸಿಎಲ್ ನೌಕರರ ಸಂಘದ ಪರ ವಕೀಲರು, ಅರ್ಜಿದಾರರ ಅರ್ಜಿಗೆ ವಿಚಾರಣೆಗೆ ಯೋಗ್ಯವಾಗಿಲ್ಲ. ಚುನಾವಣೆಯನ್ನು ಕೆಪಿಟಿಸಿಎಇಲ್ ನೌಕರರ ಸಂಘದ ಅಧಿನಿಯಮ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗುತ್ತಿದೆ.
ಇನ್ನೂ ಚುನಾವಣಾ ಮಾದರಿ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಯಾವುದೇ ನಿರ್ದೇಶನ ನೀಡಿಲ್ಲ. ವೇಳಾಪಟ್ಟಿ ಪ್ರಕಟವಾದ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬುದಾಗಿ ಕಾನೂನು ಹೇಳುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.












Click it and Unblock the Notifications