ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 28: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಕರ್ನಾಟಕ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಸೂಲಿಬೆಲೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ಅರ್ಜಿದಾರರ ಪರ ವಕೀಲರ ಕಾನೂನು ಪ್ರಕಾರ ಆದೇಶ ಹೊರಡಿಸಿದ ಅಧಿಕಾರಿ ಅಥವಾ ಅವರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ದೂರು ದಾಖಲಿಸಬೇಕಿದೆ. ಈ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಖಾಸಗಿ ದೂರು ದಾಖಲಿಸಿರುವುದು ಮತ್ತು ಆ ದೂರು ಪರಿಗಣಿಸಿ ಅರ್ಜಿದಾರರಿಗೆ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಕ್ರಮ ಜರುಗಿಸಿರುವುದು ಕಾನೂನುಬಾಹಿರ ಎಂಬ ವಾದ ಮಾನ್ಯ ಮಾಡಿದ ನ್ಯಾಯಾಲಯ ಕೇಸ್ ರದ್ದುಗೊಳಿಸಿದೆ.

ಅಲ್ಲದೆ ನ್ಯಾಯಾಲಯ ಹಿಂದೆ ರಾಜಶೇಖರಾನಂದ ಪ್ರಕರಣದಲ್ಲಿನೀಡಿರುವ ತೀರ್ಪು ಹಾಗೂ ಸುಪ್ರೀಂಕೋರ್ಟ್ ಈ ಸಂಬಂಧ ನೀಡಿರುವ ತೀರ್ಪನ್ನು ಉಲ್ಲೇಖಿಸಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರು, ಫ್ರೀಡಂಪಾರ್ಕ್ ಹೊರತುಪಡಿಸಿ ಬೆಂಗಳೂರಿನ ಇತರೆ ಭಾಗದಲ್ಲಿ ಪ್ರತಿಭಟನೆ ನಡೆಸಬಾರದೆಂದು ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘಿಸಿ ಮತ್ತು ಪೂರ್ವಾನುಮತಿ ಪಡೆಯದೇ ಬೆಂಗಳೂರಿನ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸ್.ಜೆ.ಪಾರ್ಕ್ ಠಾಣೆಯ ಇನ್ಸ್‌ಪೆಕ್ಟರ್ 6ನೇ ಎಸಿಎಂಎಂ ನ್ಯಾಯಾಲಯದಲ್ಲಿಅರ್ಜಿದಾರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ ಎಂದರು. ಆದರೆ ನಿಯಮದ ಪ್ರಕಾರ ಇನ್ಸ್‌ಪೆಕ್ಟರ್ ಗೆ ದೂರು ದಾಖಲಿಸುವ ಅಧಿಕಾರವಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದರು.
ಪ್ರಕರಣದ ಹಿನ್ನೆಲೆ: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ 2022ರ ಜು.28ರಂದು ಟೌನ್ ಹಾಲ್ ಮುಂಭಾಗ ಹಿಂದೂ ಹಿತರಕ್ಷ ಣಾ ಸಮಿತಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ "ಜಿಹಾದಿಗಳಿಗೆ ಧಿಕ್ಕಾರ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರವೀಣ್ ನೆಟ್ಟಾರ್‌ಹಂತಕರನ್ನು ಸಾರ್ವಜನಿಕವಾಗಿ ಎನ್‌ಕೌಂಟರ್‌ಮಾಡಬೇಕು" ಎಂದು ಘೋಷಣೆ ಕೂಗಿದ್ದರು.
ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಎಂ. ಆರ್. ಸತೀಶ ಬೆಂಗಳೂರಿನ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ, ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್‌ಗಳಾದ ಕಟ್ಟೆ ಸತ್ಯನಾರಾಯಣ, ಉಮೇಶ್ ಶೆಟ್ಟಿ ಮತ್ತು ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.
ಫ್ರೀಡಂಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಪ್ರತಿಭಟನೆ ಮಾಡಬಾರದೆಂದು ಸರಕಾರ ಆದೇಶಿಸಿದೆ. ಈ ನಿಯಮ ಉಲ್ಲಂಘಿಸಿ ಮತ್ತು ಸರಕಾರದಿಂದಾಗಲಿ ಅಥವಾ ಸಂಬಂಧಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಆರೋಪಿಗಳು ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಲಾಗಿತ್ತು.












Click it and Unblock the Notifications