ಇಬ್ಬರು ಪತ್ನಿ, ಓರ್ವ ಪುತ್ರಿ ಕೊಂದಿದ್ದ ಸಾಯಿಬಣ್ಣ ಗಲ್ಲು ಶಿಕ್ಷೆಯಿಂದ ಪಾರು!
ಬೆಂಗಳೂರು, ಆಗಸ್ಟ್ 29: ಮೂವರನ್ನು ಕೊಂದಿದ್ದ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರದ ಅಪರಾಧಿ ಸಾಯಿಬಣ್ಣನಿಗೆ ಕರ್ನಾಟಕ ಹೈಕೋರ್ಟ್ ಜೀವದಾನ ಮಾಡಿದೆ. ತನ್ನ ಇಬ್ಬರು ಪತ್ನಿಯರು ಹಾಗೂ ಓರ್ವ ಪುತ್ರಿಯನ್ನು ಕೊಲೆ ಮಾಡಿ ಕಳೆದ 30 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಅಪರಾಧಿಗೆ 70 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಹೈಕೋರ್ಟ್, ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.
ಸಾಯಿಬಣ್ಣ ಅಲಿಯಾಸ್ ನಿಂಗಪ್ಪ ನಾಟಿಕರ್ ಗಲ್ಲುಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಇಡೀ ಪ್ರಕರಣದ ವಿವರಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದರೆ ಅರ್ಜಿದಾರನು ಈಗಾಗಲೇ 30 ವರ್ಷಕ್ಕೂ ಅಧಿಕ ಸೆರೆವಾಸ ಅನುಭವಿಸಿದ್ದಾನೆ. ನಮ್ಮ ಪ್ರಕಾರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯನೀಡುವುದರ ಜತೆಗೆ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದರೆ ನ್ಯಾಯ ಸಂದಾಯವಾದಂತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಕಾರಣವಿಲ್ಲದೆ ವಿಳಂಬ: ನ್ಯಾಯಾಲಯದ ಈ ಆದೇಶದಿಂದಾಗಿ ಕಳೆದ 20 ವರ್ಷಗಳಿಂದಲೂ ಏಕಾಂಗಿ ಸೆರೆವಾಸ ಅನುಭವಿಸುತ್ತಿರುವ ಆತ ಜೀವವಿರುವರೆಗೂ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ಕಾರಾಗೃಹ ಅಧಿಕಾರಿಗಳು ಸಲ್ಲಿಸಿರುವ ಆರೋಗ್ಯ ವರದಿ ಪ್ರಕಾರ ಅರ್ಜಿದಾರನ ಎದೆಯ ಎರಡೂ ಭಾಗಗಳಲ್ಲಿ ನೋವು ಇದೆ, ಭಯದಿಂದ ತತ್ತರಿಸಿದ್ದಾನೆ ಮತ್ತು ಬೇಧಿಯಿಂದ ಬಳಲಿದ್ದು, ಸಿಕ್ಕಾಪಟ್ಟೆ ಆಯಾಸವಾಗಿದೆ ಎಂದು ತಿಳಿಸಲಾಗಿದೆ. ಏಕಾಂಗಿ ಸೆರೆವಾಸದಿಂದಾಗಿ ಆತನಿಗೆ ಹೀಗೆಲ್ಲಾ ಆಗುತ್ತಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಮೊದಲಿಗೆ ಸರಕಾರದಲ್ಲಿ2005ರ ಮೇ 31ರಿಂದ 2007ರ ಜ.9ರವರೆಗೆ ಅಂದರೆ ಒಂದು ವರ್ಷ 9 ತಿಂಗಳು 9 ದಿನ ವಿಳಂಬವಾಗಿದೆ. ಎರಡನೇಯದಾಗಿ ರಾಜ್ಯಪಾಲರ ಸಚಿವಾಲಯದಲ್ಲಿ2007ರ ಜ.12ರಿಂದ 2007ರ ಫೆ.2ರವರೆಗೆ ವಿಳಂಬವಾಗಿದೆ. ಮೂರನೆಯದಾಗಿ ಕೇಂದ್ರ ಸರಕಾರಕ್ಕೆ ಸಂವಹನ ಕಳುಹಿಸಿಕೊಡುವಲ್ಲಿ24 ದಿನ ವಿಳಂಬವಾಗಿದೆ. ನಾಲ್ಕನೆಯದಾಗಿ ರಾಷ್ಟ್ರಪತಿ ಬಳಿ ಅರ್ಜಿ 2007ರ ಫೆ.28ರಿಂದ 2013ರ ಜ.3ರವರೆಗೆ ಇತ್ಯರ್ಥವಾಗದೆ ಉಳಿದಿತ್ತು.
ಒಟ್ಟಾರೆ ನಾಲ್ಕು ಹಂತಗಳಲ್ಲಿ ಕ್ಷಮಾದಾನ ಅರ್ಜಿ ಪರಿಗಣಿಸುವುದು 7 ವರ್ಷ 8 ತಿಂಗಳು ವಿಳಂಬವಾಗಿದೆ. ಆದರೆ ಅದಕ್ಕೆ ಯಾವುದೇ ಕಾರಣ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಅಪರಾಧಿಯನ್ನು 2003ರ ಜ.10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೋಣೆಯಲ್ಲಿಏಕಾಂಕಿಯಾಗಿ ಇರಿಸಲಾಗಿದೆ. ಅದರಂತೆ ಆತ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರು, ಅರ್ಜಿದಾರನ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವುದು 7 ವರ್ಷ 8 ತಿಂಗಳು, 9 ದಿನ ವಿಳಂಬವಾಗಿದೆ ಮತ್ತು ಕಾನೂನಿನಲ್ಲಿಸಮ್ಮತಿ ಇಲ್ಲದಿದ್ದರೂ ಏಕಾಂಗಿ ಸೆರೆವಾಸ ವಿಧಿಸಲಾಗಿದೆ. ಹಾಗಾಗಿ ಅವರಿಗೆ ನೀಡಿರುವ ಗಲ್ಲುಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಪ್ರಕರಣದ ವಿವರ ಏನು?; ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರ ಜನವರಿ 9ರಂದು ಪತ್ನಿ ಮಾಲಕವ್ವಳನ್ನು ಕೊಲೆ ಮಾಡಿ ತಾನೇ ಬಂದು ಪೊಲೀಸರಿಗೆ ಶರಣಾಗಿದ್ದನು. ಆನಂತರ ಜೈಲಿನಲ್ಲಿರುವಾಗ ಸಹಖೈದಿ ದತ್ತು ಎಂಬಾತನೊಂದಿಗೆ ಆತನ ಸ್ನೇಹ ಬೆಳೆಯಿತು. ಜಾಮೀನು ಪಡೆದು ಸಹಖೈದಿ ದತ್ತುವಿನ ಪುತ್ರಿ ನಾಗಮ್ಮಗಳನ್ನು ವಿವಾಹವಾಗಿದ್ದನು. 2ನೇ ಪತ್ನಿ ನಾಗಮ್ಮಳಿಗೆ ವಿಜಯಲಕ್ಷ್ಮಿ ಎಂಬ ಮಗು ಜನಿಸಿತ್ತು.
ಈ ಮಧ್ಯೆ ಮೊದಲ ಪತ್ನಿ ಕೊಲೆ ಕೇಸಿನಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆ ಆಗಿತ್ತು. 1994ರಲ್ಲಿ ಪೆರೋಲ್ ಪಡೆದು ಹೊರಬಂದಿದ್ದ ಸಾಯಿಬಣ್ಣ 2ನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದನು. ಕಲಬುರಗಿ ಸೆಷನ್ಸ್ ಕೋರ್ಟ್, ಸಾಯಿಬಣ್ಣಿಗೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು.
ನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕೂಡ ಆ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆದರೆ ಆತ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬ ಹಿನ್ನೆಲೆ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications