ಉತ್ಸವಕ್ಕೆ ಕೋಟಿಗಟ್ಟಲೆ ಖರ್ಚು ಮಾಡ್ತಿರಾ, ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ನೀಡಲು ಆಗಲ್ವಾ- ಹೈಕೋರ್ಟ್ ತರಾಟೆ
ರಾಜ್ಯದ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ನೀಡದ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ ಕಾರಿದ್ದು, ಉತ್ಸವಕ್ಕೆ ಕೋಟಿಗಟ್ಟಲೆ ಖರ್ಚು ಮಾಡ್ತಿರಾ, ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ನೀಡಲು ಆಗುವುದಿಲ್ಲವೇ ಎಂದು ಟೀಕಿಸಿದೆ.
ಬೆಂಗಳೂರು, ಫೆಬ್ರವರಿ. 01: ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಮತ್ತು ಶೂ ನೀಡದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡ್ತಿರಾ, ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ಸರ್ಕಾರಕ್ಕೆ ನಾಚಿಯಾಗಲ್ವಾ..? ಅಧಿಕಾರಿಗಳಿಗೆ ಮಾನ ಮರ್ಯಾದೆ, ಆತ್ಮಸಾಕ್ಷಿ ಇಲ್ವಾ ಎಂದು ಕಿಡಿ ಕಾರಿದೆ. ಅಷ್ಟೇ ಅಲ್ಲದೆ, ಅಧಿಕಾರಿಗಳಿಗೆ ಮಾನವೀಯತೆ ಎಂಬುದಿಲ್ಲ, ಸರ್ಕಾರ ಈಗಾದಲೂ ಕಣ್ಣು ತೆರೆದು ಸಮವಸ್ತ್ರ ಒದಗಿಸಬೇಕು ಎಂದು ಹರಿಹಾಯ್ದಿದೆ.
ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು 2018ರ ಆಗಸ್ಟ್‌ನಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿತು.
ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ 2019- 20 ಮತ್ತು 2020- 21ನೇ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಕೊಟ್ಟಿದ್ದು, ಎರಡನೇ ಜೊತೆ ಖರೀದಿಗೆ ಶಾಲಾ ಮುಖ್ಯಸ್ಥರ ಎಸ್‌ಡಿಎಂಎಂಸಿ ಖಾತೆ ಹಣ ವರ್ಗಾಯಿಸಿರುವ ವಿಚಾರ ತಿಳಿಯಿತು.
ಅದನ್ನು ನೋಡಿ ಸಿಟ್ಟಿಗೆದ್ದ ನ್ಯಾಯಮೂರ್ತಿ ವೀರಪ್ಪ ಅವರು, ಸರ್ಕಾರ ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳುತ್ತಿದೆ. ಆದರೆ, ಇಲ್ಲಿ ಒಂದು ಜೊತೆಗೆ ಮಾತ್ರ ಇದೆ. ಬಹುಶಃ ಒಂದು ಜತೆಯಲ್ಲಿ ಒಂದು ಬಟ್ಟೆಯಿರುವುದಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ-ಕಾಲು ಚೀಲ ಸಿಕ್ಕದೆಯೇ ಎಂಬುದು ದೇವರಿಗೆ ಮಾತ್ರ ಗೊತ್ತು ಎಂದು ಟೀಕಿಸಿದರು.

ಏಕೆ ಸರಿಯಾದ ರೀತಿಯಲ್ಲಿ ಸಮವಸ್ತ್ರ ನೀಡಿಲ್ಲ..? ಸಮವಸ್ತ್ರ, ಶೂ-ಕಾಲುಚೀಲ ವಿತರಣೆ ಹೊಣೆ ಹೊತ್ತಿರುವ ಅಧಿಕಾರಿ ಯಾರು ಎಂಬುದನ್ನು ತಿಳಿಸಿ. ನ್ಯಾಯಾಲಯ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡುತ್ತದೆ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.
*ಮಲತಾಯಿ ಧೋರಣೆಗೆ ಕಿಡಿ*
ನಿಜಕ್ಕೂ ಅಧಿಕಾರಿಗಳಿಗೆ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆ ಇಲ್ಲ. ಅದೇ ಸಮಸ್ಯೆ ಮೂಲ. ಅವರ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ, ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ಗುಡುಗಿದರು.
ಅಲ್ಲದೆ, ಇತ್ತಿಚೆಗೆ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಕಲಿಯುವ ಒಟ್ಟು 520 ಮಕ್ಕಳಿಗೆ ಒಂದೇ ಒಂದು ಶೌಚಾಲಯ ಇತ್ತು. ಅದರಲ್ಲೂ ಗಿಡ-ಗಂಟಿ ಬೆಳೆದು ಮಕ್ಕಳು ಅದನ್ನು ಬಳಸಲು ಹೆದರುತ್ತಿದ್ದರು. ಹಾವು ಬರುತ್ತದೆ ಎನ್ನುತ್ತಿದ್ದರು. ಕೊನೆಗೆ ನಾವೇ ಅದನ್ನು ಸ್ವಚ್ಛಗೊಳಿಸಿದೆವು. ಇದು ದುರದೃಷ್ಟಕರ. ಇಂತಹ ಪರಿಸ್ಥಿತಿಯಿದ್ದರೆ ಸರ್ಕಾರಕ್ಕೆ ನಾಚಿಕೆ ಉಂಟು ಮಾಡುವುದಿಲ್ಲವೇ..? ಸರ್ಕಾರ ಉತ್ಸವ ನಡೆಸುತ್ತದೆ. ಏನೇನಿಕ್ಕೋ ಕೋಟಿ ಗಟ್ಟಲೇ ಖರ್ಚು ಮಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣ ವಿಚಾರದಲ್ಲಿ ಸರ್ಕಾರ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕಲ್ಲವೇ..? ಎಂದು ನ್ಯಾಯಪೀಠ ಪ್ರಶ್ನಿಸಿತು.
ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಕೂಡಲೇ ಮಕ್ಕಳಿಗೆ ಸಮವಸ್ತ್ರ, ಶೂ ಹಾಗೂ ಕಾಲು ಚೀಲ ವಿತರಿಸಬೇಕು. ರಾಜ್ಯ ಸರ್ಕಾರವು ಕಣ್ಣು ತೆರೆಯಲು ಇದು ಸಕಾಲ ಎಂದು ತಿಳಿಸಿದ ಹೈಕೋರ್ಟ್, ಅಂತಿಮವಾಗಿ ಎರಡು ವಾರ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಕಲ್ಪಿಸಬೇಕು. ಇಲ್ಲವಾದರೆ ಸಂಬಂಧಿತ ಅಧಿಕಾರಿಯ ವಿರುದ್ಧ ಆರೋಪ ನಿಗದಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತು.












Click it and Unblock the Notifications