ಇಡಿ ನೋಟಿಸ್ ಪ್ರಕರಣ : ಡಿ.ಕೆ.ಶಿವಕುಮಾರ್‌ಗೆ ರಿಲೀಫ್
ಬೆಂಗಳೂರು, ಫೆಬ್ರವರಿ 07 : ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿರುವ ಸಚಿವ ಡಿ.ಕೆ.ಶಿವಕುಮಾರ್ ಕೋರಿಕೆಯನ್ನು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಫೆ.8ರಂದು ಜಾರಿ ನಿರ್ದೇಶನಾಲಯದ ಮುಂದೆ ಡಿ.ಕೆ.ಶಿವಕುಮಾರ್ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಇದನ್ನು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಗುರುವಾರ ಅರ್ಜಿಯ ವಿಚಾರಣೆ ನಡೆಯಿತು. ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಮಾಡಿದರು. 'ಅರ್ಜಿದಾರರು ಆದಾಯ ತೆರಿಗೆ ಇಲಾಖೆಗೆ ಕಾಲಕಾಲಕ್ಕೆ ಕಾನೂನು ಬದ್ಧವಾಗಿ ತೆರಿಗೆ ಪಾವತಿ ಮಾಡಿದ್ದಾರೆ' ಎಂದರು.

'ಐ.ಟಿ.ದಾಳಿ ನಡೆದ ಸಂದರ್ಭದಲ್ಲಿ ತೆರಿಗೆ ಪಾವತಿಸಲು ಇನ್ನೂ ಕಾಲಾವಕಾಶವಿತ್ತು. ಅರ್ಜಿದಾರರನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ಸಮನ್ಸ್‌ಗೆ ತಡೆ ನೀಡಬೇಕು' ಎಂದು ವಾದ ಮಂಡನೆ ಮಾಡಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಪ್ರಭುಲಿಂಗ ಕೆ.ನಾವದಗಿ ಅವರು, 'ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಇ.ಡಿ. ಪರಿಶೀಲನೆ ನಡೆಸಲಿದೆ' ಎಂದು ಹೇಳಿದರು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.
ಇ.ಡಿ. ಅಧಿಕಾರಿಗಳು ಫೆ.8ರಂದು ಹಾಜರಾಗುವಂತೆ ನೀಡಿದ ಸಮನ್ಸ್ ಪ್ರಶ್ನಿಸಿ ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ್, ಶರ್ಮಾ ಮತ್ತು ರಾಜೇಂದ್ರ ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.












Click it and Unblock the Notifications