ಛೇ, ಬಿಜೆಪಿ ನಾಯಕರಿಗೆ ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ: ಕಾಂಗ್ರೆಸ್ ಲೇವಡಿ
ಬೆಂಗಳೂರು, ಆಗಸ್ಟ್ 26: ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬ್ಯಾರಿಕೇಡ್‌ಗಳ ಹಿಂದೆ ನಿಂತಿದ್ದ ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.
ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನ ಮಂತ್ರಿಯವರು ಬೆಂಗಳೂರು ನಗರಕ್ಕೆ ಬಂದಿದ್ದರು. ಆ ವೇಳೆ ಬಿಜೆಪಿ ನಾಯಕರಾದ ಮುನಿರತ್ನ ಆರ್ ಅಶೋಕ, ನಳಿನ್ ಕುಮಾರ್ ಕಟೀಲ್, ಗೋಪಾಲಯ್ಯ ಸೇರಿದಂತೆ ಹಲವಾರು ಮಂದಿ ಸಾರ್ವಜನಿಕರಿಗಾಗಿ ಹಾಕಿದ್ದ ಬ್ಯಾರಿಕೇಡ್ ಹಿಂಭಾಗ ಸಾಮಾನ್ಯರಂತೆ ನಿಂತಿದ್ದರು.

ಇದನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬಿಜೆಪಿ ನಾಯಕರದ್ದು ಎಂತಹಾ ದುಸ್ಥಿತಿ. ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ವ್ಯಂಗ್ಯವಾಡಿದೆ.
'@BJP4Karnataka ನಾಯಕರದ್ದು ಎಂತಹಾ ದುಸ್ಥಿತಿ..
— Karnataka Congress (@INCKarnataka) August 26, 2023
ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ!
ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ!
ಛೇ, ಮಿನಿಮಮ್ ಮರ್ಯಾದೆಯೂ… pic.twitter.com/QOZ3k8ZiXQ
ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ
ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ. ಬಿಜೆಪಿ ಕರ್ನಾಟಕ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಹೇಳಿದೆ.
ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ "ಸರ್ವಾಧಿಕಾರಿ"ಯ ಮೊದಲ ಬಲಿಪಶುಗಳು ಬಿಜೆಪಿಗರಿಗೇ ಅಲ್ಲವೇ? ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ISRO ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸಿದ್ದ ಮೋದಿಯವರನ್ನು ಸ್ವಾಗತಿಸಲು ಸ್ವತಃ ರಾಜ್ಯ BJP ನಾಯಕರಿಗೂ ಅವಕಾಶ ಕೊಟ್ಟಿಲ್ಲ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೊಮ್ಮಾಯಿಯವರನ್ನು ಕೂಡ ಹತ್ತಿರಕ್ಕೆ ಬಿಟ್ಟು ಕೊಳ್ಳಲಿಲ್ಲ. ರಾಜ್ಯ BJP ನಾಯಕರಿಗೆ ಇದಕ್ಕಿಂತ ಅಪಮಾನವುಂಟೆ? BJP ನಾಯಕರಿಗೆ ಕಿಂಚಿತ್ತಾದರೂ ಆತ್ಮಗೌರವ ಬೇಡವೆ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ರಾಜ್ಯ BJP ನಾಯಕರನ್ನು ಅವರ ಪಕ್ಷದ ವರಿಷ್ಟರು ಕಾಲಕಸಕ್ಕಿಂತ ಕಡೆಯಾಗಿ ನೋಡುತ್ತಾರೆ ಎಂಬುದಕ್ಕೆ ಮೋದಿಯವರ ಇಂದಿನ ವರ್ತನೆಯೇ ಸಾಕ್ಷಿ. ಬಿಜೆಪಿ ನಾಯಕರು ಇಂದು ಮೋದಿಯವರ ಮುಂದೆ ಹಲ್ಲುಗಿಂಜಿ ಜೀ ಹುಜೂರು ಎಂದು ಮಂಡಿಯೂರಿ ನಿಂತರೂ, ಮೋದಿಯವರು ಕಣ್ಣೆತ್ತಿಯೂ ನೋಡಿಲ್ಲ.
ಮೋದಿಯವರ ಸರ್ವಾಧಿಕಾರಿ ಮನಃಸ್ಥಿತಿಯ ಬಗ್ಗೆ ಸತ್ಯ ಹೇಳಿದಾಗಲೆಲ್ಲಾ ಬಿಜೆಪಿಯವರು ಎಗರೆಗರಿ ಬೀಳುತ್ತಿದ್ದರು. ಬಹುಶಃ ರಾಜ್ಯ BJP ನಾಯಕರಿಗೆ ಇಂದು ಮೋದಿಯವರ ಸರ್ವಾಧಿಕಾರಿ ಮನೋಭಾವದ ಸತ್ಯದರ್ಶನವಾಗಿರಬಹುದು. BJP ನಾಯಕರೆ, ಇನ್ನೆಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ? ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ರಾಜಕೀಯವಾಗಿ, ಸೈದ್ದಂತಿಕವಾಗಿ ವಿರೋಧಿಗಳಾಗಿದ್ದರೂ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ. ಪ್ರಧಾನಿ ಮುಂದೆ ಬ್ಯಾರಿಕೆಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ. ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ "ವಿರೋಧ ಪಕ್ಷದ ನಾಯಕ"ನ ಆಯ್ಕೆ ಸಾಧ್ಯವಾಗುವುದೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ
"ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ" ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು ಎಂದು ತಿರುಗೇಟು ನೀಡಿದೆ.
ಅಲ್ಲದೆ ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ.ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ 'ಗಾಂಧಿ' ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications