ಹಿಂದುಳಿದ ವರ್ಗಕ್ಕೆ ಸರಕಾರದ ಯೋಜನೆ ರತ್ನಗಂಬಳಿ
ಹಿಂದುಳಿದ ವರ್ಗದವರ ವಿದ್ಯಾಭ್ಯಾಸವೂ ಸೇರಿದ ಹಾಗೆ ವಿವಿಧ ಉದ್ದೇಶಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅವುಗಳ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನ ಓದಿ
ಬೆಂಗಳೂರು, ಮೇ 6: ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹಿಂದುಳಿದ ವರ್ಗದವರಿಗೆ ಎಷ್ಟೊಂದು ಯೋಜನೆಗಳಿವೆ ಗೊತ್ತಾ? 2017-18ನೇ ಸಾಲಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ಸಾಲ ಯೋಜನೆಗೆ ನಿರ್ದಿಷ್ಟ ಅರ್ಜಿ ತೆಗೆದುಕೊಂಡು, ಅದನ್ನು ಭರ್ತಿ ಮಾಡಿ, ಈ ವರ್ಷ ಜೂನ್ 9ರೊಳಗೆ ಸಲ್ಲಿಸಬೇಕು. ಅರ್ಜಿಯನ್ನು ಪಡೆದುಕೊಳ್ಳುವುದಕ್ಕೆ ಮೇ 31 ಕೊನೆ ದಿನ ಅನ್ನೋದು ನೆನಪಿರಲಿ. ನಿಗಮದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆದಿದ್ದರೆ ಅಂಥವರು ಮತ್ತು ಅವರ ಕುಟುಂಬದವರು ಮತ್ತೆ ಅರ್ಜಿ ಹಾಕುವ ಹಾಗಿಲ್ಲ. ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.[ಅಲ್ಪಸಂಖ್ಯಾತರಿಗಾಗಿ ರಾಜ್ಯ ಸರ್ಕಾರದಿಂದ ನೂತನ ಸಾಲ ಸೌಲಭ್ಯ]
ಅರ್ಜಿದಾರರು ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಆದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಲಾಗಿದೆ) ಇನ್ನು ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ವರಮಾನ 40 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ 55 ಸಾವಿರದೊಳಗಿರಬೇಕು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000, ಪಟ್ಟಣ ಪ್ರದೇಶದವರಿಗೆ 1,20,000 ದೊಳಗೆ ಇರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳಲ್ಲಿರಬೇಕು. ಐಎಫ್ ಎಸ್ ಸಿ.ಕೋಡ್ ಹೊಂದಿರುವ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.[ಕ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲ]

ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ
ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಸಾರಿಗೆ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ 5 ಲಕ್ಷದವರೆಗೆ ಸಾಲ ಹಾಗೂ ನಿಗಮದಿಂದ ಶೇ 20ರಷ್ಟು ಗರಿಷ್ಠ 1 ಲಕ್ಷ ಶೇಕಡ 4ರ ಬಡ್ಡಿದರದಲ್ಲಿ ಮಾರ್ಜಿನ್ ಹಣ. 1 ಲಕ್ಷಕ್ಕಿಂತ ಕಡಿಮೆ ಇರುವ ಸಾಲಕ್ಕೆ ಶೇ 30ರಷ್ಟು, ಅಥವಾ ಗರಿಷ್ಠ 10,000 ಸಹಾಯಧನ (ಸಬ್ಸಿಡಿ).

ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆ
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷಗಳ ಮಿತಿಯಲ್ಲಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರತುಪಡಿಸಿ ಇತರೆ ಪ್ರವೇಶ ಪರೀಕ್ಷೆ ಮುಖಾಂತರ ಮೆರಿಟ್ ಆಧಾರದ ಮೇಲೆ ಈ ಕೆಳಕಂಡ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1 ಲಕ್ಷದ ವರೆಗೆ ಸಾಲ ಒದಗಿಸಲಾಗುವುದು.
ಕೋರ್ಸ್ ಗಳ ಪಟ್ಟಿ ಹೀಗಿದೆ: (1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿ.ಹೆಚ್‍ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್.ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್.ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್.ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ. (27) ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್.ಸಿ.(ಎ.ಜಿ.)

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್ ಡಾಕ್ಟ್ರಲ್, ಪಿಎಚ್.ಡಿ ಮಾಸ್ಟರ್ ಡಿಗ್ರಿ, ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ವಾರ್ಷಿಕ 3.50 ಲಕ್ಷಗಳಂತೆ, 3 ವರ್ಷಗಳ ಕೊರ್ಸ್ ನ ಅವಧಿಗೆ ಗರಿಷ್ಠ 10 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಅರ್ಜಿದಾರರು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ 3.50 ಲಕ್ಷ ಮೀರಿರಬಾರದು ಹಾಗೂ ಶೇ 60ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ
ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಅನುಸಾರ ಗರಿಷ್ಠ 2,00,000ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ ಗರಿಷ್ಠ ಶೇ 1.5 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ ಸಾಲವಾಗಿರುತ್ತದೆ.

ಕಿರುಸಾಲ ಯೋಜನೆ
ಹಣ್ಣು, ತರಕಾರಿ ಮಾರುವವರು, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ 4ರ ಬಡ್ಡಿ ದರದಲ್ಲಿ ಗರಿಷ್ಠ 10,000 ಸಾಲ ಹಾಗೂ 5000 ಸಹಾಯಧನ. ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ: ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ 2,00,000 ವರೆಗೆ ಆರ್ಥಿಕ ನೆರವು. ಇದರಲ್ಲಿ ಗರಿಷ್ಠ ಶೇ 1.5 ರಷ್ಟು ಸಹಾಯಧನ. ಉಳಿಕೆ ಮೊತ್ತ ಶೇ.2ರ ಬಡ್ಡಿದರದಲ್ಲಿ ಸಾಲವಾಗಿರುತ್ತದೆ.

ಈ ಲಿಂಕ್ ಕ್ಲಿಕ್ ಮಾಡಿ
ಇನ್ನು ಅರ್ಜಿ ಸಲ್ಲಿಸಲು ಮತ್ತಿತರ ವಿವರಗಳಿಗೆ ಈ ಲಿಂಕ್ ಗಳನ್ನು ಕ್ಲಿಕ್ ಮಾಡಿ












Click it and Unblock the Notifications