Hema Committee ಕೇರಳ ಚಿತ್ರರಂಗದ ನಿರ್ಲಕ್ಷ್ಯದಿಂದಲೇ ಹೇಮಾ ಕಮಿಟಿ: ಕರ್ನಾಟಕದಲ್ಲೂ ಅದೇ ಪರಿಸ್ಥಿತಿ
ಕೇರಳ ಚಿತ್ರರಂಗದಲ್ಲಿ ಹೇಮಾ ಕಮಿಟಿಯನ್ನು ರಚನೆ ಮಾಡುವುದಕ್ಕೆ ಮುಖ್ಯ ಕಾರಣವೇ ಅಲ್ಲಿನ ಚಿತ್ರರಂಗದ ಅಸಹಾಯಕ ಹಾಗೂ ನಿರ್ಲಕ್ಷ್ಯ ತನ. ಈಗ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಅದೇ ಇದೆ. ಕನ್ನಡ ಚಿತ್ರರಂಗದಲ್ಲಿಯೂ ಈಗ ಹೇಳಿಕೊಳ್ಳುವ ನಾಯಕತ್ವ ಇಲ್ಲ. ಚಿತ್ರರಂಗದ ಸಮಸ್ಯೆಗಳನ್ನು ಹಾಗೂ ಅನ್ಯಾಯಗಳನ್ನು ಸರಿಪಡಿಸುವ ಸಮರ್ಥ ನಾಯಕರಿಲ್ಲ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರು ಹಾಕಿಕೊಟ್ಟ ಪರಂಪರೆ ಈಗ ಉಳಿದಿಲ್ಲ. ಈಗ ಮೀಟೂ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರದಂತೆ ಕರ್ನಾಟಕ ಸರ್ಕಾರವು ಸಹ ಕಮಿಟಿಯೊಂದನ್ನು ರಚನೆ ಮಾಡುವ ಸಾಧ್ಯತೆ ಇದೆ.
ಹೇಮಾ ಕಮಿಟಿಯ ಹಿನ್ನೆಲೆ ಏನು ?
ಭಾರತದ ಉಳಿದ ಚಿತ್ರರಂಗಗಳಿಗೆ ಹೋಲಿಕೆ ಮಾಡಿದರೆ, ಕೇರಳಂ ಚಿತ್ರೋದ್ಯಮವು ಸಣ್ಣದು. ಆದರೆ, ಗುಣಮಟ್ಟದ ಸಿನಿಮಾ ಹಾಗೂ ಮೇಕಿಂಗ್‌ನಿಂದ ಈ ಚಿತ್ರರಂಗ ಭಾರತ ಮಾತ್ರವಲ್ಲ ವಿಶ್ವದಲ್ಲೇ ತನ್ನದೇ ಆದ ಮನ್ನಣೆಯನ್ನು ಗಳಿಸಿದೆ. ಆದರೆ, ಈ ರೀತಿ ವಿಶೇಷ ಸಿನಿಮಾಗಳಿಂದ ಮನ್ನಣೆ ಗಳಿಸಿದ್ದರೂ, ಪ್ರಮುಖ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಚಿತ್ರರಂಗ ಆ ನಟಿಯ ಬೆಂಬಲಕ್ಕೆ ನಿಲ್ಲಲಿಲ್ಲ. ಅಲ್ಲಿಂದಲೇ ಚಿತ್ರರಂಗದ ಒಳಗೆ ಬಿರುಕುಂಟಾಗಿತ್ತು.

ಮಲೆಯಾಳಂ ಚಿತ್ರರಂಗದ ಪ್ರಖ್ಯಾತ ನಟಿಯನ್ನು ಕೇರಳದ ಪ್ರಸಿದ್ಧ ನಗರವಾದ ಕೊಚ್ಚಿಯಲ್ಲಿ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಆಗ ಅಮ್ಮಾ (ಅಸೋಸಿಯೇಷನ್ ಆಫ್ ಮಲೆಯಾಳಂ ಮೂವಿ ಆರ್ಟಿಸ್ಟ್)ನಿಂದ ನಿರೀಕ್ಷಿತ ನೆರವು ಸಿಗಲಿಲ್ಲ. ನಿರೀಕ್ಷಿತ ನೆರವು ಎನ್ನುವುದಿರಲಿಲ್ಲ. ಅಸೋಸಿಯೇಷನ್ ಮೌನದ ಹೊದಿಕೆಯೊಳಗೆ ಬೆಚ್ಚಗೆ ಮಲಗಿಬಿಟ್ಟಿತ್ತು. ಇದರಿಂದ ಮಾನಸಿಕ ಆಘಾತಕ್ಕೆ ಒಳಗಾದ ನಟಿ ಆ ಅಸೋಸಿಯೇಷನ್‌ನಿಂದಲೇ ಹೊರ ಬಂದರು. ಇದಾದ ಕೆಲವೇ ದಿನಗಳಲ್ಲಿ ಕೇರಳದ ಪ್ರಮುಖ ನಟಿಯರಿಂದಲೇ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (wcc) ರಚನೆಯಾಯಿತು. ಈ ಅಸೋಸಿಯೇಷನ್ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿತು. ಹೋರಾಟಕ್ಕೆ ಇಳಿಯಿತು.
ಈ ಕಮಿಟಿಯಲ್ಲಿ ಇದ್ದವರು ಮಲೆಯಾಳಂನ ಪ್ರಮುಖ ನಟಿಯರಾದ ಪಾರ್ವತಿ ತಿರೂವೊತ್, ರಮ್ಯಾ ನಂಬೀಷನ್. ಇವರ ಹೊಸ ಯೂನಿಯನ್ ಕೇರಳದಲ್ಲಿ ಇದೀಗ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿದೆ. ಸಿನಿಚಿತ್ರರಂಗದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು, ಕೆಲಸದ ಜಾಗ ಸೇಫ್ ಆಗಿರಬೇಕು ಎನ್ನುವುದು ಸೇರಿದಂತೆ ವಿವಿಧ ಒತ್ತಾಯಗಳನ್ನು ಈ ಯೂನಿಯನ್ ಮಾಡಿತ್ತು. ಈ ಯೂನಿಯನ್‌ನ ಒತ್ತಾಯದ ಮೇರೆಗೆ ಅಂದಿನ ಕೇರಳ ಸರ್ಕಾರವು 2017ರಲ್ಲಿ ಜಸ್ಟಿಸ್ ಕೆ. ಹೇಮಾ ಅವರ ನೇತೃತ್ವದಲ್ಲಿ ಜಸ್ಟಿಸ್ ಹೇಮಾ ಕಮಿಟಿಯನ್ನು ರಚನೆ ಮಾಡಿತ್ತು. ಆ ಕಮಿಟಿಯು 2019ರಲ್ಲೇ ವರದಿ ಸಲ್ಲಿಸಿತ್ತು. ಆದರೆ, ಆ ವರದಿ ಇದೀಗ ಬಹಿರಂಗವಾಗಿದೆ.
ಕನ್ನಡ ಚಿತ್ರರಂಗದಲ್ಲೂ ಗಟ್ಟಿ ನಾಯಕರಿಲ್ಲ
ನಟಿಯೊಬ್ಬರ ಮೇಲೆ ಅತ್ಯಾಚಾರ ನಡೆದರೂ ಅಲ್ಲಿನ ಚಿತ್ರರಂಗ ಅದನ್ನು ಹೋರಾಟದ ರೂಪಕ್ಕೆ ಇಳಿಸಲಿಲ್ಲ. ಕನ್ನಡ ಚಿತ್ರರಂಗದಲ್ಲೂ ಅದೇ ಪರಿಸ್ಥಿತಿ ಇದೆ. ಕಳೆದ ಒಂದು ದಶಕದ ಅವಧಿಯಲ್ಲಿ ಕನ್ನಡ ಚಿತ್ರರಂಗ ಹಾಗೂ ಕನ್ನಡ ಚಿತ್ರೋದ್ಯಮವನ್ನು ಒಂದು ಮಾಡಿ ಮುಂದಕ್ಕೆ ತೆಗೆದುಕೊಂಡು ಹೋಗುವ ಒಬ್ಬೇ ಒಬ್ಬ ನಟರೂ ಮುಂದೆ ಬರುತ್ತಿಲ್ಲ. ಕನ್ನಡ ಚಿತ್ರರಂಗ ಕಳೆದ ಕೆಲವು ವರ್ಷಗಳಲ್ಲಿ ಟೈಟಲ್ ವಿವಾದ, ಸಿನಿಮಾ ಶೂಟಿಂಗ್‌ನಲ್ಲಿ ಸುರಕ್ಷತೆ ವಿಷಯ ಸೇರಿದಂತೆ ಹಲವು ಸೋವು - ನೋವುಗಳನ್ನು ಕಂಡಿದೆ. ಫ್ಯಾನ್ಸ್ ವಾರ್, ಸ್ಟಾರ್ ವಾರ್ ಎಂದು ಇನ್ನಿಲ್ಲದ ಕೆಟ್ಟ ಸಂಪ್ರದಾಯಗಳು ಹುಟ್ಟಿಕೊಂಡಿವೆ.
ಮೀಟೂ ಆರೋಪಗಳೂ ಕೇಳಿ ಬಂದಿದೆ. ಆದರೆ, ಚಿತ್ರರಂಗ ಅದಕ್ಕೆಲ್ಲ ನಿರಾಶಾದಾಯಕವಾಗಿ ಪ್ರತಿಕ್ರಿಯಿಸಿದೆ. ಒಬ್ಬ ಸ್ಟಾರ್ ನಟರೂ ಗಟ್ಟಿತನವನ್ನು ತೋರಿಸಿಲ್ಲ. ಇದನ್ನೆಲ್ಲ ಸರಿಪಡಿಸುವ ಬಗ್ಗೆ ಮಾತನಾಡಿಲ್ಲ. ಈಗಲೂ ಮೀಟೂ ಆರೋಪ ಕೇಳಿ ಬರುತ್ತಿದೆ. ಈಗಲೂ ಯಾರು ಮಾತನಾಡುತ್ತಿಲ್ಲ. ಹೀಗಾಗಿ, ಸರ್ಕಾರವೇ ಮಧ್ಯ ಪ್ರವೇಶ ಮಾಡಿ ಕಮಿಟಿ ರಚನೆ ಮಾಡಬೇಕಿದೆ.












Click it and Unblock the Notifications