ಭೂಕಂಪ ಸಂತ್ರಸ್ತರಿಗೆ ಕರ್ನಾಟಕ ನೆರವಿನ ಸುನಾಮಿ
ಬೆಂಗಳೂರು, ಏ. 28 : ಏಪ್ರಿಲ್ 25 ಶನಿವಾರ ಬೆಳಗ್ಗೆ 11.45. ಭೂಮಂಡಲದ ಸಮಕಾಲೀನ ಇತಿಹಾಸದಲ್ಲಿ ಒಂದು ಕರಾಳ ಕ್ಷಣ. ನೇಪಾಳ ಮತ್ತು ಉತ್ತರ ಭಾರತದಲ್ಲಿ ಪಾತಾಳ ಒಮ್ಮೆ ಮೈ ಕೊಡವಿಕೊಂಡಿತು. ಸರ್ವನಾಶಕ್ಕೆ ಅಷ್ಟೇ ಸಾಕಿತ್ತು. ಆದರೆ ಭೂಕಂಪಕ್ಕೆ ಬಾಯಾರಿಕೆ ಇಂಗಿರಲಿಲ್ಲ. ಪದೇ ಪದೇ ಬಿಕ್ಕಳಿಸಿತು. ಊರಿಗೆ ಊರೇ ನೆಲಸಮವಾಯಿತು. ಸಾವಿರಾರು ಜನರನ್ನು ನುಂಗಿ ನೀರು ಕುಡಿದ ಧರಣಿ ಗಹಗಹಿಸಿ ನಕ್ಕಿರಬೇಕು!
ಈ ನರಜನ್ಮ "ಪದಕುಸಿಯೇ ನೆಲವಿಹುದು ಮಂಕುತಿಮ್ಮ" ಎನ್ನುವ ಹಾಗೂ ಇಲ್ಲ.
ಆಗಿದ್ದು ಆಗಿಹೋಯಿತು. ಬದುಕುಳಿದವರನ್ನು ಸಂತೈಸುವ, ಅವರಿಗೆ ಹೊಸ ಬಾಳನ್ನು ಕಟ್ಟಿಕೊಡುವುದಷ್ಟೆ ಜತೆಗಾರರ ಕೆಲಸ. ಈ ಕೈಂಕರ್ಯಕ್ಕೆ ಇಡೀ ವಿಶ್ವವೇ ಬದ್ಧವಾಗಿದೆ. ಕಷ್ಟನಷ್ಟ, ಸಾವು ನೋವು, ಆಕ್ರಂದನದ ಗಳಿಗೆಯಲ್ಲಿ ಭಾರತ ಹಿರಿಯಣ್ಣನಂತೆ ಸಂತ್ರಸ್ತರ ನೆರವಿಗೆ ಸಕಲ ನೆರವು ನೀಡಲು ಹಗಲಿರುಳು ಶ್ರಮಿಸುತ್ತಿದೆ. ಭರತಖಂಡ ಅಪ್ಪಿಕೊಂಡಿರುವ "ಆಪರೇಷನ್ ಮೈತ್ರಿ" ಅಭಿಯಾನಕ್ಕೆ ಭಾರತ ಜನನಿಯ ತನುಜಾತೆ ಕರ್ನಾಟಕ ತನ್ನ ಕೈಲಾದ ನೆರವಿನ ಹಸ್ತ ಚಾಚುತ್ತಿದೆ.[ಬೆಂಗಳೂರಿನ ಪ್ರವೀಣ್ ಸೇರಿದ 200 ಸಾಹಸಿಗಳ ರಕ್ಷಣೆ]
ಒಬ್ಬೊಬ್ಬರು ಒಂದೊಂದು ರೀತಿ ನೆರವು ಕೊಡುತ್ತಾರೆ. ಅದು ಕೆಲವು ರುಪಾಯಿಗಳಿರಬಹುದು, ಎರಡು ಕಂಬಳಿ ಇರಬಹುದು, ಮಕ್ಕಳಿಗೆ, ವೃದ್ಧರಿಗೆ ಸರಿಹೊಂದುವ ಒಂದು ಕೌದಿ, ಒಂದು ಸ್ವೆಟರ್, ನಾಲ್ಕು ಬಿಸ್ಕಟ್ ಪೊಟ್ಟಣ, ಕುಡಿಯುವ ನೀರಿನ ಬಾಟಲ್, ನೀಲಗಿರಿ ಎಣ್ಣೆ, ಅಮೃತಾಂಜನ, ನೋವು ನೀಗುವ ಮುಲಾಮು ಆಗಬಹುದು.
ಕರ್ನಾಟಕದ ಜನತೆ ಅಪಾರ ಸಂಖ್ಯೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ನಾನಾ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ನನ್ನ ಕಣ್ಣಿಗೆ ಬಿದ್ದ ಕೆಲವು ಜನ, ಕೆಲವು ಸಂಸ್ಥೆ, ಸಂಘಟನೆಗಳ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ನಿಮ್ಮ ಕಣ್ಣಿಗೆ ಬಿದ್ದವರ ಹೆಸರು, ವಿವರಗಳನ್ನು ನನಗೆ ಇಮೇಲ್ ಮಾಡಿ.
* ಸಂತ್ರಸ್ತ ಕನ್ನಡಿಗರ ನೆರವಿಗೆ ಮೊದಲು ಧಾವಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ, ಐಪಿಎಸ್ ಉಮೇಶ್ ಕುಮಾರ್ ಮತ್ತು ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಸರೋಜಮ್ಮ ಅವರನ್ನು ನೇಪಾಳಕ್ಕೆ ಕಳಿಸಿದರು.
* ಕನ್ನಡಿಗರ ಕ್ಷೇಮಕ್ಕಾಗಿ ರಾಜ್ಯ ಪ್ರತ್ಯೇಕ ಸಹಾಯವಾಣಿಯನ್ನು ತೆರೆಯಿತು. ಅಲ್ಲದೆ ಸರಕಾರದ ಅನೇಕ ಅಧಿಕಾರಿಗಳ ಫೋನ್ ನಂಬರುಗಳನ್ನು ಪ್ರಕಟಿಸಿತು. ವಿವರಗಳು ಇಲ್ಲಿವೆ.
* ಭೂಕಂಪ ಸಂಭವಿಸಿದ ತಕ್ಷಣ ನೇಪಾಳಕ್ಕೆ ರಾಜ್ಯದ ವೈದ್ಯರ ತಂಡ ಕಳಿಸುವುದಾಗಿ ಪ್ರಕಟಿಸಿದವರು ಆರೋಗ್ಯ ಸಚಿವ ಯುಟಿ ಖಾದರ್. ನುಡಿದಂತೆ ಹತ್ತು ಸದಸ್ಯರ ವೈದ್ಯರ ತಂಡ ಸೋಮವಾರ ಬೆಳಗ್ಗೆ ನೇಪಾಳಕ್ಕೆ ಹೊರಟಿತು. ವೈದ್ಯರ ಹೆಸರುಗಳು ಇಂತಿವೆ.
* ನೈಸರ್ಗಿಕ ಪ್ರಕೋಪ ಉಂಟಾದಾಗ ನೆರವಿಗೆ ಧಾವಿಸುವುದು ಮಾಧ್ಯಮಗಳ ಕಳಕಳಿ. ಈ ಸಂಪ್ರದಾಯವನ್ನು ಮುಂದುವರೆಸಿದ್ದು ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಪತ್ರಿಕಾ ಸಮೂಹದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್. ನಿಮ್ಮ ನೆರವನ್ನು ಇಲ್ಲಿ ಕೊಡಬಹುದು.
* ಅದೇ ರೀತಿ ಟೈಮ್ಸ್ ಗ್ರೂಪ್ ಪರಿಹಾರ ಸಾಮಗ್ರಿಗಳನ್ನು ಕಲೆಹಾಕುವ ಕೇಂದ್ರಗಳನ್ನು ಬೆಂಗಳೂರಿನಲ್ಲಿ ನಾಲ್ಕು ಕಡೆ ತೆರೆದಿದೆ. ಅವುಗಳ ವಿಳಾಸ ಮತ್ತು ನೀವು ಯಾವಯಾವ ವಸ್ತುಗಳನ್ನು ಕೊಡಬಹುದೆಂಬ ಪಟ್ಟಿ ಇದೆ, ನೋಡಿ. ದೂರವಾಣಿ ಸಂಖ್ಯೆ 07042 422334
* ಭೂಕಂಪ ಪೀಡಿತರ ನೆರವಿಗೆ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಒಂದು ತಿಂಗಳ ವೇತನ ನೀಡಲು ಸೋಮವಾರ ನಡೆದ ವಿಶೇಷ ವಿಧಾನಮಂಡಲ ಕಲಾಪದಲ್ಲಿ ನಿರ್ಧರಿಸಲಾಗಿದೆ. ವೇತನ ನೀಡಲು ಎಲ್ಲ ಪಕ್ಷದ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ.
* ಭೂಕಂಪ ಸಂತ್ರಸ್ತರಿಗೆ ನೆರವಾಗಲು ಪ್ರಧಾನಮಂತ್ರಿ ಅವರ ವಿಪತ್ತು ನಿರ್ವಹಣಾ ನಿಧಿಗೆ ಒಂದು ತಿಂಗಳ ವೇತನವನ್ನು ನೀಡುವುದಾಗಿ ಬೆಂಗಳೂರು ದಕ್ಷಿಣದ ಸಂಸದ ಮತ್ತು ಕೇಂದ್ರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸಚಿವ ಅನಂತಕುಮಾರ್ ಘೋಷಿಸಿದ್ದಾರೆ.
* ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಆರ್.ಅಶೋಕ್ ಅವರು ಆರು ತಿಂಗಳ ವೇತನವನ್ನು ಸಂತ್ರಸ್ತರ ನಿಧಿಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಅವರು ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆಯಲಿದ್ದಾರೆ.
* ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮತ್ತು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಒಂದು ತಿಂಗಳ ವೇತನವನ್ನು ಪ್ರಧಾನಮಂತ್ರಿ ಅವರ ವಿಪತ್ತು ನಿರ್ವಹಣಾ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.
* ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಅಂತರ್ ಜಾಲದ ಮೂಲಕ ನೆರವುಗಳನ್ನು ಕಳಿಸಬಹುದು . ಈ ತಾಣ ನಿನ್ನೆಯಿಂದ ಡೌನ್ ಆಗಿತ್ತು. ಈಗ ಚುರುಕಾಗಿದೆ.* ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಮಾನವ ನಿರ್ಮಿತ, ನಿಸರ್ಗ ನಿರ್ಮಿತ ಪ್ರಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ನೇಪಾಳ ಭೂಕಂಪ ಸಂತ್ರಸ್ತರ ಸಹಾಯಕ್ಕೆ ಧಾವಿಸಿದೆ. ವಿವರಗಳಿಗೆ ಓದಿರಿ













Click it and Unblock the Notifications