ಭಕ್ತರನ್ನು ಕಾಯಬೇಕಾದ ಗಣೇಶನಿಗೆ ಫುಲ್ ಸೆಕ್ಯೂರಿಟಿ
ಗಣೇಶ ಮೂರ್ತಿಗಳ ವಿಸರ್ಜನೆ ಈಗ ಒಂದರ್ಥದಲ್ಲಿ Z ಸೆಕ್ಯೂರಿಟಿಯಲ್ಲಿ ನಡೆಯುತ್ತಿದೆ. ಮಂಡ್ಯದ ನಾಗಮಂಗಲ ಗಲಭೆಯ ನಂತರ ಇದೀಗ ಕರ್ನಾಟಕದಾದ್ಯಂತ ಗಣೇಶ ಮೂರ್ತಿಗಳ ವಿಸರ್ಜನೆಯಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಕ್ರಮ ತೆಗೆದುಕೊಂಡಿದೆ. ಮಂಡ್ಯದಲ್ಲಿ ನಡೆದ ದುಂರತದ ಕಾರ್ಮೋಡ ಇನ್ನೂ ಸರಿದಿಲ್ಲ. ಈ ರೀತಿಯ ದುರಂತ ಸಂಭವಿಸಲಿದೆ ಎಂದು ಯಾರೂ ಅಂದಾಜಿಸಿರಲಿಲ್ಲ. ಆದರೆ, ಈ ರೀತಿಯ ಯಾವುದೇ ಘಟನೆ ಮರುಕಳಿಸಬಾರದು ಎನ್ನುವ ವಿಚಾರದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.
ಗಣೇಶ ಚತುರ್ಥಿ ಮುಗಿದಿದೆಯಾದರೂ, ಗಣೇಶ ಮೂರ್ತಿಗಳ ವಿಸರ್ಜನೆ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗದಲ್ಲಿ ಮುಂದುವರಿದಿದೆ. ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ರೀತಿಯ ಅವಘಡಗಳು ಸಂಭವಿಸಬಾರದು ಎನ್ನುವ ವಿಚಾರದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಸೂಕ್ಷ್ಮವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸ್ ವ್ಯಾನ್‌ಗಳು ಹಿಂಬಾಲಿಸುತ್ತಿವೆ. ಗಣೇಶ ಮೂರ್ತಿ ಮೆರವಣಿಗೆಯ ಮುಂದೆ ಹಾಗೂ ಹಿಂದೆ ಪೊಲೀಸ್ ವಾಹನ, ಪೊಲೀಸರು ಭದ್ರತೆ ಕಲ್ಪಿಸುತ್ತಿದ್ದಾರೆ. ಇದರೊಂದಿಗೆ ಬೈಕ್‌ನಲ್ಲಿಯೂ ಪೊಲೀಸರು ಗಣೇಶ ಮೂರ್ತಿಯೊಂದಿಗೆ ಸಾಗುತ್ತಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಎಚ್ಚರಿಕೆ ವಹಿಸಲಾಗಿದೆ.

ಸಣ್ಣ ಗಣೇಶ ಮೂರ್ತಿಗಳ ವಿಸರ್ಜನೆಗೂ ಭದ್ರತೆ
ಇನ್ನು ಬೆಂಗಳೂರು ಮಹಾನಗರ ಹಾಗೂ ಕರ್ನಾಟಕದಾದ್ಯಂತ ಭಾರೀ ಎಚ್ಚರಿಕೆ ವಹಿಸಲಾಗಿದೆ. ಇದೀಗ ಸಣ್ಣ ಗಣೇಶ ಮೂರ್ತಿಗಳ (ಬೀದಿಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ) ವಿಸರ್ಜನೆ ಸಂದರ್ಭದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದು. ಕಿಡಿಗೇಡಿಗಳು ಸಾರ್ವಜನಿಕರ ಗುಂಪಿನಲ್ಲಿ ಸೇರದಂತೆ ಸಾರ್ವಜನಿಕರೇ ಅಲರ್ಟ್ ಆಗಿದ್ದಾರೆ.
ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್
ಇನ್ನು ಈ ವಿಚಾರದಲ್ಲಿ ಪೊಲೀಸ್ ಇಲಾಖೆಯು ಸಹ ಅಲರ್ಟ್ ಆಗಿದೆ. ಮಂಡ್ಯದ ನಾಗಮಂಗಲ ಗಲಭೆ ಪ್ರಕರಣದಲ್ಲಿ ಪೊಲೀಸರಿಂದಲೂ ಕೆಲವು ಲೋಪಗಳಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದರು. ಅದರಲ್ಲಿ ಗಣೇಶ ಮೂರ್ತಿ ವಿಸರ್ಜನೆ ಯಾವ ಮಾರ್ಗವಾಗಿ ಸಾಗಬೇಕು ಎನ್ನುವುದು ಸಹ ಪ್ರಮುಖವಾಗಿತ್ತು. ಇನ್ನು ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದರು. ಅಲ್ಲದೇ ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಎಚ್ಚರಿಕೆಯನ್ನು ನೀಡಿದ್ದರು. ಹೀಗಾಗಿ, ಅಧಿಕಾರಿಗಳು ಸಹ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಪೊಲೀಸರಿಗೂ ಮಾಹಿತಿ ನೀಡಲಾಗುತ್ತಿದ್ದು, ಜನರೂ ಸಹ ಜವಾಬ್ದಾರಿ ತೋರಿಸುತ್ತಿದ್ದಾರೆ.
ನಾಗಮಂಗಲ ದೇಶಾದ್ಯಂತ ಸುದ್ದಿ: ಅಪಖ್ಯಾತಿ
ಮಂಡ್ಯದ ಗಲಭೆ ಪ್ರಕರಣವು ದೇಶದಾದ್ಯಂತ ಸುದ್ದಿಯಾಗಿದೆ. ಸಹಜವಾಗಿಯೇ ಕರ್ನಾಟಕದ ಬಗ್ಗೆ ಚರ್ಚೆ ನಡೆದಿದೆ. ಇಂಗ್ಲಿಷ್ ಸುದ್ದಿ ಮಾಧ್ಯಮಗಳು ಸಹ ಇದನ್ನು ವರದಿ ಮಾಡಿವೆ. ಆದರೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶ್ರಮಿಸಿದ್ದು, ಇದೀಗ ಪರಿಸ್ಥಿತಿ ಬಹುತೇಕ ತಿಳಿಯಾಗಿದೆ.












Click it and Unblock the Notifications