ಕರ್ನಾಟಕದಲ್ಲಿ ಸೆಪ್ಟೆಂಬರ್ 3ರವರೆಗೂ ಭಾರಿ ಮಳೆ
ಬೆಂಗಳೂರು, ಆಗಸ್ಟ್ 31: ಕರ್ನಾಟಕದಲ್ಲೂ ಸೆಪ್ಟೆಂಬರ್ 3ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Recommended Video
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಇದೆ. ಕೆಲವು ಭಾಗಗಳಲ್ಲಿ ತುಂತುರು ಮಳೆ ಸಾಧ್ಯತೆ ಇದ್ದರೆ, ನಗರದ ಬಹುತೇಕ ಭಾಗ ಹಾಗೂ ಬೆಂಗಳೂರು ಹೊರವಲಯದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತಿತರೆ ಕಡೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.
ನಗರದಾದ್ಯಂತ ಬಿಸಿಲಿನ ತಾಪಮಾನ ಕಡಿಮೆ ಆಗಲಿದ್ದು, ಮೋಡ ಕವಿದ ವಾತಾವರಣ ಇರಲಿದ್ದು, ತಾಪಮಾನ ಗರಿಷ್ಠ 35 ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದೆ. ಇದು 44 ವರ್ಷಗಳಲ್ಲೇ ಈ ತಿಂಗಳು ಅತ್ಯಂತ ಮಳೆ ಸುರಿದಿದೆ. 1983ರ ಆಗಸ್ಟ್‌ನಲ್ಲಿ ಶೇ.23.8ರಷ್ಟು ಹೆಚ್ಚುವರಿ ಮಳೆ ಸುರಿದಿತ್ತು. 1976ರ ಆಗಸ್ಟ್ನಲ್ಲಿ ದೇಶದಲ್ಲಿ ಶೇ.28.4ರಷ್ಟು ಹೆಚ್ಚುವರಿ ಮಳೆಯಾಗಿದೆ.
ಕೇಂದ್ರ ಜಲ ಆಯೋಗವು ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ 27ರವರೆಗೆ ದೇಶದ ಜಲಾಶಯಗಳ ಒಟ್ಟಾರೆ ನೀರು ಸಂಗ್ರಹದ ಸ್ಥಿತಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉತ್ತಮವಾಗಿದೆ. ಕಳೆದ 10 ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಈ ವರ್ಷ ಉತ್ತಮವಾಗಿದೆ.

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ
ಸೆಪ್ಟೆಂಬರ್ 3ರವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಸೋಮವಾರ ವರುಣನ ಸಿಂಚನ ಆಗಬಹುದು ಎಂದು ಬೆಂಗಳೂರಿನ ಐಎಂಡಿ ವಿಜ್ಞಾನಿ ಮತ್ತು ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಹೇಗಿದೆ?
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರದಿಂದ ಗುರುವಾರದವರೆಗೂ ಸಾಧಾರಣದಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬುಧವಾರ ಮತ್ತು ಗುರುವಾರ ವ್ಯಾಪಕ ಮಳೆಯಾಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ ಸಾಧಾರಣದಿಂದ ವ್ಯಾಪಕ ಮಳೆಯಾದರೆ, ಸೆಪ್ಟೆಂಬರ್ 2 ಮತ್ತು 3 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ಜಲಾಶಯಗಳು ಈಗಾಗಲೇ ಭರ್ತಿ
ಕಳೆದ ಒಂದು ತಿಂಗಳಿನಿಂದ ಉತ್ತಮವಾಗಿ ಸುರಿದ ಮುಂಗಾರು ಮಳೆಯಿಂದ ರಾಜ್ಯದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಈಗ ಹಿಂಗಾರು ಮಳೆ ಕೂಡ ಉತ್ತಮವಾಗಿ ಸುರಿಯಲಿದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ರಾಜ್ಯದ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಈ ವರ್ಷ ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಉತ್ತರಕನ್ನಡ, ದಕ್ಷಿಣ ಕನ್ನಡದಲ್ಲಿ ಯೆಲ್ಲೋಅಲರ್ಟ್
ಬುಧವಾರ ಮತ್ತು ಗುರುವಾರ ವ್ಯಾಪಕ ಮಳೆ ಸಾಧ್ಯತೆ ಹಿನ್ನೆಲೆ ಈಗಾಗಲೇ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು, ಉತ್ತರ ಒಳನಾಡಿನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications