ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ 4 ಸಾವು
ಬೆಂಗಳೂರು, ಸೆ.13 : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುರುವಾರ ಮಳೆಯ ಆರ್ಭಟಕ್ಕೆ ಸಿಲುಕಿ ರಾಜ್ಯದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು, ಮೈಸೂರು, ಚಿತ್ರದುರ್ಗ, ರಾಯಚೂರು, ತುಮಕೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅತ್ಯಧಿಕ 21 ಸೆಂ.ಮೀ ಮಳೆಯಾಗಿದ್ದರೆ, ತುಮಕೂರಿನಲ್ಲಿ 14 ಸೆಂ.ಮೀ.ಮಳೆ ಸುರಿದಿದೆ.
ಬೆಂಗಳೂರು ಮತ್ತು ತುಮಕೂರಿನಲ್ಲಿ ಮಳೆಯ ನೀರಿಗೆ ಒಬ್ಬರು ಕೊಚ್ಚಿ ಹೋಗಿದ್ದರೆ, ಮೈಸೂರು ಮತ್ತು ರಾಯಚೂರಿನಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿಯೂ ಮಳೆ ಸುರಿಸಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ.
ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದಲ್ಲಿಯೂ ಮಳೆಯ ಹಾವಳಿ ಮುಂದುವರೆದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. (ಕರ್ನಾಟಕದ ಮಳೆಯ ಸುದ್ದಿಗಳು)

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
ಬೆಂಗಳೂರು ನಗರ ಮತ್ತು ವಿಮಾನ ನಿಲ್ದಾಣಗಳ ಭಾಗಗಳಲ್ಲಿ ಗುರುವಾರ ರಾತ್ರಿ 4 ಸೆಂ.ಮೀ.ಮಳೆಯಾಗಿದೆ.ತಾವರೆಕೆರೆ ಬಳಿ ಸಂಪಗಿರಾಮರೆಡ್ಡಿ (55) ಎಂಬ ವ್ಯಕ್ತಿ, ಕೆಲಸ ಮಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದವರು ಮೋರಿಯಲ್ಲಿ ಕೊಚ್ಚಿಹೋಗಿದ್ದಾರೆ. ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ಯುವಕ ನೀರುಪಾಲು
ತುಮಕೂರಿನಲ್ಲಿ ಗುರುವಾರ 14 ಸೆಂ.ಮೀ.ಮಳೆ ಸುರಿದ್ದಿದ್ದು, ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ ರಾಮಾಂಜಿನಪ್ಪ (19) ಎಂಬುವರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬರಗೂರು ಪಟ್ಟಣದಲ್ಲಿ ವಕ್ಫ್ ಮಂಡಳಿಗೆ ಸೇರಿದ ಜುಮ್ಮಾ ಮಸೀದಿಯ ಗೋಡೆ ಕುಸಿದು ಬಿದ್ದಿದೆ.

ಗೋಡೆ ಕುಸಿದು ಇಬ್ಬರು ಸಾವು
ಗುರುವಾರ ಮೈಸೂರಿನ ಉದಯಗಿರಿಯಲ್ಲಿ ಪಾಳುಬಿದ್ದ ಗೋಡೆ ಕುಸಿದು ಗೌಸಿಯಾನಗರ ನಿವಾಸಿ ಖಾದರ್ (32) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ ಅಲ್ಲಿಯೇ ಆಟವಾಡುತ್ತಿದ್ದ ಅರ್ಬಾಸ್ (12) ಮತ್ತು ಸಿದ್ದಿಕ್ (8) ಎಂಬ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಲಷ್ಕರ್ ಮೊಹಲ್ಲಾದಲ್ಲಿ ಶಿಥಿಲವಾದ ಕಟ್ಟಡದ ಮಳಿಗೆಯೊಂದು ಕುಸಿದು ಬಿದ್ದಿದೆ.

ಬಳ್ಳಾರಿಯಲ್ಲೂ ಮಳೆಯ ಆರ್ಭಟ
ಬಳ್ಳಾರಿ ನಗರ, ಕಂಪ್ಲಿ, ಹೊಸಪೇಟೆಯಲ್ಲಿ 4 ಸೆಂ.ಮೀ.ಮಳೆಯಾಗಿದೆ. ತುಂಗಭದ್ರಾ ಜಲಾಶಯದ 10 ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.

ಚಿತ್ರದುರ್ಗದಲ್ಲಿ ದಾಖಲೆ ಮಳೆ
ಗುರುವಾರ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ದಾಖಲೆಯ 21 ಸೆಂ.ಮೀ.ಮಳೆಯಾಗಿದೆ. ಚಿಕ್ಕಜಾಜೂರಿನ ಕಾಗಳಗೆರೆಯಲ್ಲಿ ಮನೆಯ ಗೋಡೆ ಕುಸಿದು ಹನುಮಂತಪ್ಪ (73) ಎಂಬುವರು ಸಾವನ್ನಪ್ಪಿದ್ದಾರೆ. ಹಿರಿಯೂರು ತಾಲೂಕಿನಲ್ಲಿ ದಾಖಲೆಯ 675 ಮಿಮೀ ಮಳೆಯಾಗಿದೆ. ತಾಲೂಕಿನಲ್ಲಿ 60ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, 15ಕ್ಕೂ ಹೆಚ್ಚು ಕುರಿಗಳು ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿವೆ.

ಮಂಡ್ಯದಲ್ಲೂ ಮಳೆ
ಮಂಡ್ಯದಲ್ಲಿ ಗುರುವಾರ 30 ಮಿಮಿ ಮಳೆಯಾಗಿದೆ. ಶ್ರೀರಂಗಪಟ್ಟಣ, ಮಳವಳ್ಳಿ, ನಾಗಮಂಗಳ ತಾಲೂಕಿನಲ್ಲಿ ವಾಡಿಕೆಗಿಂತ ಶೇ 25ರಷ್ಟು ಹೆಚ್ಚಿನ ಮಳೆಯಾಗಿದೆ. ಮಳೆಯಿಂದಾಗಿ ಮಳವಳ್ಳಿಯಲ್ಲಿ ಎರಡು ಮನೆಗಳು ಕುಸಿದಿವೆ.

ಕರಾವಳಿ, ಮಲೆನಾಡಿನಲ್ಲೂ ಮಳೆ
ಕೆಲವು ದಿನಗಳ ನಂತರ ಮಂಗಳೂರಿನಲ್ಲಿ ಗುರುವಾರ ಮಳೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಮುಂತಾದ ಜಿಲ್ಲೆಗಳಲ್ಲೂ ಮಳೆ ಮುಂದುವರೆದಿದ್ದು, ಕೃಷಿ ಚಟುವಟಿಕೆ ಮತ್ತು ಜನಜೀವನಕ್ಕೆ ಅಡಚಣೆ ಉಂಟಾಗಿದೆ.











Click it and Unblock the Notifications