ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ, ತುಂಬಿದ ತುಪ್ಪರಿ ಹಳ್ಳ!
ಧಾರವಾಡ: ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದಲ್ಲಿ ಈಗ ಮಳೆ ಅಬ್ಬರಿಸಿದೆ. ಧಾರವಾಡ ಸೇರಿ ಅನೇಕ ಕಡೆ ಗುಡುಗು ಸಹಿತ ಅಬ್ಬರದ ಮಳೆ ಆಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅಲ್ಲದೇ ಕಳೆದ 3-4 ತಿಂಗಳಿಂದ ಬತ್ತಿ ಹೋಗಿದ್ದ ತುಪ್ಪರಿ ಹಳ್ಳ ಈಗ ತುಂಬಿ ಭೋರ್ಗರೆಯುತ್ತಿದ್ದು, ಇದು ಕೂಡ ರೈತರಿಗೆ ಖುಷಿ ಕೊಟ್ಟಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ & ಇನಾಂಹೊಂಗಲದ ಮಧ್ಯೆ ಇರುವ ತುಪ್ಪರಿ ಹಳ್ಳದ ಸೇತುವೆ ಸಮಕ್ಕೆ ಹಳ್ಳ ತುಂಬಿ ಬಂದಿದೆ. ಕೆಲ ವರ್ಷಗಳ ಹಿಂದೆ ಅತಿವೃಷ್ಟಿ ಪರಿಣಾಮವಾಗಿ, ಈ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಇದೀಗ ಮತ್ತೆ ಭಾರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಮತ್ತೊಮ್ಮೆ ತುಪ್ಪರಿ ಹಳ್ಳ ಭೋರ್ಗರೆದು ಖುಷಿ ನೀಡಿದೆ. ಮತ್ತೊಂದು ಕಡೆ ಮುಂದಿನ ಹಲವು ತಿಂಗಳಿಗೆ ಆಗುವಷ್ಟು ನೀರು ಈಗ ಶೇಖರಣೆ ಆಗುತ್ತಿದೆ.

ಧಾರವಾಡ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿನ್ನೆ ಮಧ್ಯಾಹ್ನ ಭಾರಿ ಮಳೆ ಆಗಿದೆ. ಈ ಹಿನ್ನೆಲೆ ಬಿತ್ತನೆಗೆ ಸಜ್ಜಾಗುತ್ತಿರುವ ರೈತರಲ್ಲಿ ಈ ಮಳೆ ಹೊಸ ಆಶಾ ಭಾವನೆ ಮೂಡಿಸಿದೆ. ಇದರ ಜೊತೆಗೆ ಈಗ ಬತ್ತಿ ಹೋಗಿದ್ದ ಹಳ್ಳ, ಕೊಳ್ಳಗಳಲ್ಲಿ ನೀರು ಬರುತ್ತಿರುವುದು ಕೃಷಿಕರಲ್ಲಿ ನೆಮ್ಮದಿಯ ಭಾವ ನೀಡಿದೆ. ಆದರೆ ನಗರ ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಜನರು ನಲುಗಿದ್ದು, ಈ ಸಮಯದಲ್ಲಿ ಹಲವು ರೀತಿಯ ಸಮಸ್ಯೆ ಎದುರಿಸಿದ್ದಾರೆ.
ಮನೆಗೆ ನುಗ್ಗಿದ ನೀರು
ಧಾರವಾಡ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ನೀರು ರಸ್ತೆ ಅಕ್ಕಪಕ್ಕದ ಮನೆಗೂ ನುಗ್ಗಿತ್ತು. ಇಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸದ ಕಾರಣ ಚರಂಡಿ ಮೂಲಕ ಪಕ್ಕದ ಕಟ್ಟೆಗೆ ಹರಿಯಬೇಕಿದ್ದ ಮಳೆ ನೀರು ಈಗ ರಸ್ತೆ ಇಕ್ಕೆಲಗಳ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಮುಗಿಸಲಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಕೋಪವನ್ನ ಕೂಡ ವ್ಯಕ್ತಪಡಿಸಿದ್ದಾರೆ.
ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಬೀಳಲಿದೆ. ಈ ಮೂಲಕ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇದೀಗ ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ. ಜೂನ್ 6 ರಿಂದ 8 ರವರೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಜೂನ್ 8 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮಲೆನಾಡು ಜಿಲ್ಲೆ ಪ್ರದೇಶಗಳಲ್ಲಿ ಕೂಡ ಮಳೆ ಅಬ್ಬರ ತೋರಿಸಲಿದೆ. ಹೀಗಾಗಿ ಹೈ ಅಲರ್ಟ್ ಘೋಷಿಸಿರುವ, ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ತಿಳಿಸಿದ್ದಾರೆ.












Click it and Unblock the Notifications