Heavy Rain: ಮಳೆ.. ಮಳೆ.. ಭಾರಿ ಮಳೆಗೆ ತುಂಬುತ್ತಿರುವ ಡ್ಯಾಂ!
ಮಳೆರಾಯ ಅಬ್ಬರ ತೋರಿಸುತ್ತಿರುವ ಪರಿಣಾಮ ಕರ್ನಾಟಕದ ಕೆರೆಗಳು, ಕಟ್ಟೆಗಳು ತುಂಬಿ ಹರಿಯುತ್ತಿವೆ. ಕೇವಲ 2-3 ತಿಂಗಳ ಹಿಂದೆ ಒಂದೊಂದು ಹನಿ ನೀರಿಗೂ ಪರದಾಡುತ್ತಿದ್ದ, ಹಳ್ಳಿಗಳ ಜನರಿಗೆ ಇದೀಗ ಭಾರಿ ಖುಷಿಯಾಗಿದೆ. ಯಾಕಂದ್ರೆ ಕೆರೆ & ಕಟ್ಟೆಗಳು ತುಂಬುತ್ತಿವೆ. ಹಾಗೇ ಹಳ್ಳಗಳು ಕೂಡ ತುಂಬಿಕೊಳ್ಳುತ್ತಿವೆ. ಇದರ ಜೊತೆಗೆ ನದಿಯ ನೀರಿನ ಹರಿವು ಕೂಡ ಹೆಚ್ಚಾಗುತ್ತಿದ್ದು, ಕರ್ನಾಟಕದ ಡ್ಯಾಂಗಳು ತುಂಬಿಕೊಳ್ಳುತ್ತಿವೆ.
ಕಳೆದ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದ ಕಾರಣ ಭಾರಿ ಆತಂಕ ಎದುರಾಗಿತ್ತು. ಹೀಗಾಗಿಯೇ ಡ್ಯಾಂ ನೀರಿನ ಮಟ್ಟ ಕುಸಿದು ಬಿದ್ದು ರೈತರು ಆತಂಕದಲ್ಲೇ ದಿನದೂಡುವ ಸ್ಥಿತಿ ಇತ್ತು. ಬೇಸಿಗೆ ಬೇಗೆ ಮಧ್ಯೆ ಮಳೆ ಅಬ್ಬರ ಮೆಲ್ಲಗೆ ಶುರುವಾಗಿತ್ತು. ಹವಾಮಾನ ತಜ್ಞರ ಮುನ್ಸೂಚನೆಯಂತೆ ಈ ಮಳೆರಾಯ ಅಬ್ಬರಿಸಿದ್ದ. ಹೀಗಾಗಿ ನಿಧಾನವಾಗಿ ಬರಿದಾಗಿದ್ದ ನದಿಗಳಿಗೆ ನೀರು ಬಂದಿದ್ದು, ಕರ್ನಾಟಕದ ಡ್ಯಾಂಗಳು ಕೂಡ ತುಂಬಿಕೊಳ್ಳುತ್ತಿವೆ. ಈ ಪೈಕಿ ದಕ್ಷಿಣ ಕರ್ನಾಟಕ ಭಾಗದ ಜೀವನದಿ ಕಾವೇರಿ ಒಡಲು ಸೇರಿದಂತೆ ಉತ್ತರ ಕರ್ನಾಟಕದ ಹಲವು ನದಿಗಳಿಗೆ ಉತ್ತಮವಾಗಿ ನೀರು ಹರಿದು ಬರುತ್ತಿದೆ.

ಕೆಆರ್‌ಎಸ್ ನೀರಿನ ಮಟ್ಟ ಇಷ್ಟು
ಮಂಡ್ಯ ಜಿಲ್ಲೆಯಲ್ಲಿ ಇರುವ ಬೆಂಗಳೂರಿನ ಜಲಮೂಲ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ವೇಗವಾಗಿ ಏರಿಕೆ ಕಾಣುತ್ತಿದೆ. ಗರಿಷ್ಠ 124.80 ಅಡಿ ಎತ್ತರ ಇರುವ ಕೆಆರ್‌ಎಸ್ ಡ್ಯಾಂ ಈಗ 84.24 ಅಡಿ ನೀರು ಹೊಂದಿದೆ. ಹಾಗೇ 49.452 ಟಿಎಂಸಿ ಸಾಮರ್ಥದ ಈ ಜಲಾಶಯದಲ್ಲಿ 12.783 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆಯ ಅಬ್ಬರ ಶುರುವಾದ ಬೆನ್ನಲ್ಲೇ ಡ್ಯಾಂಗೆ ಒಳ ಹರಿವು 1,467 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. ಮತ್ತೊಂದು ಕಡೆ 547 ಕ್ಯೂಸೆಕ್ ನೀರನ್ನು ಇದೀಗ ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಇದು ರೈತರಿಗೆ ಒಂದಷ್ಟು ನೆಮ್ಮದಿಯ ನೀಡುತ್ತಿದೆ.
10 ದಿನ ಇದೇ ರೀತಿ ಮಳೆ
ಕರ್ನಾಟಕದಲ್ಲಿ ಮಳೆಯ ಅಬ್ಬರ ಬಲು ಜೋರಾಗುತ್ತಿದ್ದು, ಮುಂದೆಯೂ ಹೀಗೆ ಬೀಳಲಿದೆ. ನಿನ್ನೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಿಢೀರ್ ಶುರುವಾದ ಮುಂಗಾರು ಮಳೆ ಇಂದು ಕೂಡ ಮುಂದುವರಿಯಲಿದೆ. ಅದರಲ್ಲೂ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿ ಮಂಡ್ಯ, ಮೈಸೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ. ಅಲ್ಲದೆ ಮುಂದಿನ 10 ದಿನಗಳ ಕಾಲ ಇದೇ ರೀತಿ ಮಳೆ ಆಗಬಹುದು ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ.












Click it and Unblock the Notifications