48 ಗಂಟೆಗಳ ಕಾಲ ಕರ್ನಾಟಕದಲ್ಲಿ ಮಳೆ
ಬೆಂಗಳೂರು, ಸೆಪ್ಟೆಂಬರ್ 11 : ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸೆ. 11 ಮತ್ತು12ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ನೈಋತ್ಯ ಮುಂಗಾರು ರಾಜ್ಯದಲ್ಲಿ ಬಿರುಸಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. 48 ಗಂಟೆಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದು, ಗರಿಷ್ಠ 3.3 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿವೆ.

ಗುರುವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ವಿಜಯಪುರದಲ್ಲಿ ಮಳೆ ಸುರಿದಿದೆ. ಬಳ್ಳಾರಿಯ ಕಂಪ್ಲಿ ತಾಲೂಕಿನ ಶ್ರೀರಾಮರಂಗಪುರ ಗ್ರಾಮದ ಶಿವಪ್ಪ ಹೊನ್ನೂರಪ್ಪ ಎಂಬ ವ್ಯಕ್ತಿ ಕಾಲು ಜಾರಿ ಬಿದ್ದು ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆ ಬಳಿಯ ಹಿರೇಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದಿ ಇಬ್ಬರು ಬಾಲಕರು ಕಣ್ಮರೆಯಾಗಿದ್ದಾರೆ. ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಮಳೆಯಿಂದಾಗಿ ಸೇತುವೆ ಕುಸಿದಿದೆ.
ಉಡುಪಿ, ತುಮಕೂರು, ರಾಯಚೂರು ಜಿಲ್ಲೆಗಳ ವಿವಿಧ ಪ್ರದೇಶದಲ್ಲಿ ಗುರುವಾರ ಮಳೆಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ 17 ಸೆಂ. ಮೀ. ಮಳೆಯಾಗಿದೆ. ತುಮಕೂರಿನ ಗುಬ್ಬಿಯಲ್ಲಿ 10 ಸೆಂ. ಮೀ. ಮಳೆಯಾಗಿದೆ.
ಆರೆಂಜ್ ಅಲರ್ಟ್ : ಮುಂದಿನ 48 ಗಂಟೆಗಳ ಕಾಲ ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಆರೆಂಲ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications