Heavy Rain: ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ: 1 ಸಾವು, ಮತ್ತೊಬ್ಬರು ಕಣ್ಮರೆ!
Heavy Rrain: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಪಡೆದುಕೊಂಡಿದ್ದು ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತವು ವ್ಯಾಪಕ ಮತ್ತು ನಿರಂತರ ಮಳೆಯಿಂದ ಹಾನಿಯಾಗುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಧಾರವಾಡದ ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಜನ ಜಾನುವಾರುಗಳನ್ನು ರಕ್ಷಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅಂದರೆ ಜೂನ್ 12ರ 8:30 ಗಂಟೆಯವರೆಗೆ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡು ಕ್ರಮವಹಿಸಲಾಗಿದೆ ಎಂದು ಅವರು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದ್ದಾರೆ.

ಜಿಲ್ಲಾಡಳಿತದ ಮುಂಜಾಗ್ರತೆಯಿಂದ ಯಶಸ್ವಿಯಾದ ರಕ್ಷಣಾ ಕಾರ್ಯ: ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ (ಜೂ.12 ರ ಬೆಳಿಗ್ಗೆ 8:30 ರ ವರೆಗೆ) ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲಾಡಳಿತದ ಮುಂಜಾಗೃತಾ ಕ್ರಮಗಳಿಂದಾಗಿ ಬಹುತೇಕ ಸ್ಥಳಗಳಲ್ಲಿ ಉಂಟಾಗಿದ್ದ ಅಪಾಯವನ್ನು ಸಮರ್ಥವಾಗಿ ನಿರ್ವಹಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನ, ಜನುವಾರು ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಇಲ್ಲಿನ ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮದ ಹತ್ತಿರ ಹಳ್ಳದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31) ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದೆ. ಇವರೊಂದಿಗೆ ಇದ್ದ ಕುಂದಗೋಳ ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26) ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತು ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬಳ್ಳಿನಗರ ತಾಲೂಕು ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್ ಹತ್ತಿರ ಬೈಕಿನಲ್ಲಿ ರಸ್ತೆ ದಾಟುವಾಗ ಹುಸೇನಸಾಬ ಸಯ್ಯದಸಾಬ ಕಳಸ (58) ಅವರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಇವರೊಂದಿಗೆ ಬೈಕ್‍ನಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ ಕಲ್ಲನಗೌಡ ಆರ್.ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಾಡಳಿತವು ಕಣ್ಮರೆಯಾದ ವ್ಯಕ್ತಿಯ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ತಪಾಸಣೆ ಕಾರ್ಯ ಮುಂದುವರೆದಿದೆ. ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲು ಬೆಳಗಾವಿಯಿಂದ ಇಂದು ಸಂಜೆ ಎಸ್‍ಡಿಆರ್‍ಎಫ್ ತಂಡ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಪೊಲೀಸ್ ಹಾಗೂ ಅಗ್ನಿಶಾಮಕ ಪಡೆಗಳ ಸಹಾಯದಿಂದ ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಬೆಳಗಾವಿಯ ಬಸವರಾಜ್ ಭಂಡಾರಿ, ವಿಜಯಲಕ್ಷ್ಮಿ ಭಂಡಾರಿ, ರಮ್ಯಾ ಭಂಡಾರಿ, ಸೌಮ್ಯ ಭಂಡಾರಿ ಹಾಗೂ ಅವರ ಸಾಕುನಾಯಿ, ಬೆಕ್ಕುನ್ನು ರಕ್ಷಿಸಲಾಯಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮತ್ತು ತಹಶೀಲ್ದಾರ ಸುಧೀರ ಸಾವುಕಾರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಈಜು ತಜ್ಞರೊಂದಿಗೆ ರಕ್ಷಣೆ ಮಾಡಿ ನೀರಿನಿಂದ ಹೊರ ತರಲಾಯಿತು.
ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ನಿಗರಿಹಳ್ಳಕ್ಕೆ ಹಬ್ಬಳ್ಳಿ ನಗರ, ಉಣಕಲ್ ಮತ್ತು ನವಲೂರ ಕಡೆಯಿಂದ ಬಾರಿ ಪ್ರಮಾಣದ ಮಳೆ ನೀರು ಬಂದಿದ್ದರಿಂದ ಹಳ್ಳದಲ್ಲಿ ಹಾಕಲಾಗಿದ್ದ ಕುರಿ ಶೆಡ್‍ಗೆ ರಾತ್ರಿ 12 ಗಂಟೆಗೆ ಸುಮಾರಿಗೆ ಹಳ್ಳದ ನೀರು ಬಂದು ಶೆಡ್‍ನಲ್ಲಿರುವ ಅಂದಾಜು 100 ಕುರಿಗಳು 3 ಜನರು ಸಿಲುಕಿಕೊಂಡಿದ್ದರು.
ಹುಬ್ಬಳ್ಳಿ ತಹಶೀಲ್ದಾರ್ ಜೆ.ಬಿ.ಮಜ್ಜಗಿ ಹಾಗೂ ಡಿವಾಯ್‍ಎಸ್‍ಪಿ ವಿನೋಧ ಮುಕ್ತೆದಾರ ಅವರ ನೇತೃತ್ವದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ತಂಡದವರು ಪರಿಹಾರ ಕ್ರಮಗಳನ್ನು ಕೈಗೊಂಡು ಶೆಡ್‍ನಲ್ಲಿ ಸಿಲುಕಿದ್ದ ಕುರಿಗಳ ಮಾಲೀಕರಾದ ಬ್ಯಾಹಟ್ಟಿ ಗ್ರಾಮದ ಹಜರೇಸಾಬ ಹುಸೇನಸಾಬ ನೂಲ್ವಿ ಮತ್ತು ರಾಯಪ್ಪ ರಾಮಪ್ಪ ಕಬ್ಬೇರ ಹಾಗೂ ಆಯಟ್ಟಿ ಗ್ರಾಮದ ಹನಮಂತಪ್ಪ ಕಲ್ಲಪ್ಪ ಬೇವೂರ ಅವರನ್ನು ರಕ್ಷಿಸಲಾಯಿತ್ತು. ಮತ್ತು ಅಂದಾಜು 100 ಕುರಿಗಳನ್ನು ಅಗ್ನಿ ಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಗಿದೆ. ಇವುಗಳ ಪೈಕಿ ಎರಡು ಕುರಿಗಳು ಹಳ್ಳದಲ್ಲಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ.
ಮನೆಹಾನಿ: ನಿರಂತರ ಮಳೆಯಿಂದಾಗಿ ಜಿಲ್ಲೆಯ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ 3 ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ತಾಲೂಕಿನ ತಹಶೀಲ್ದಾರರು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.












Click it and Unblock the Notifications