Heavy Rain: ಮಲೆನಾಡಿಗೆ ಮೊದಲ ಮಳೆ ಸಿಂಚನ; ಇಂದು ಕೂಡ ಈ ಜಿಲ್ಲೆಗಳಲ್ಲಿ ಮಳೆ!
ಬೇಸಿಗೆಯ ಬಿಸಿಲಿಗೆ ಒಂದು ಕಡೆ ಜನ ಹೈರಾಣಾಗಿದ್ದರೆ, ಮತ್ತೊಂದು ಕಡೆ ಬೇಸಿಗೆಯಲ್ಲೂ ಮಳೆರಾಯನ ದರ್ಶನವಾಗಿದೆ. ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ವರ್ಷದ ಮೊದಲ ಮಳೆ ಬಿದ್ದಿದ್ದು, ಜನರಲ್ಲಿ ಸಂತಸ ಮೂಡಿಸಿದೆ.
ಬುಧವಾರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದು, ಜನರ ಸಂತಸಕ್ಕೆ ಕಾರಣವಾಗಿದೆ. ಭದ್ರಾವತಿ ನಗರದಲ್ಲಿ ಮಳೆಯಾಗುತ್ತಿರುವ ದೃಶ್ಯಗಳನ್ನು ಎಕ್ಸ್ ಖಾತೆಯಲ್ಲಿ ಹಲವು ಬಳಕೆದಾರರು ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ಮಾತ್ರವಲ್ಲದೆ ಬುಧವಾರ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದೆ. ತಾಳಿಹಳ್ಳ, ಆವತಿ, ಆನೂರು ಪ್ರದೇಶಗಳಲ್ಲಿ ಕೂಡ ಲಘು ಮಳೆಯಾಗಿದೆ. ಅತ್ತಿಗುಂಡಿ, ಲಿಂಗದಹಳ್ಳಿ ಪ್ರದೇಶದಲ್ಲಿ ಕೂಡ ಚದುರಿದಂತೆ ಸಾಧಾರಣ ಮಳೆಯಾಗಿದೆ.
Thunderstorm in Bhadravati ⛈️#Karnatakarains @ravikeerthi22 pic.twitter.com/IZt56Yv2TF
— ಸಂಕೇತ್./.Sanket. (@IamSanket0014) April 3, 2024
ಗುರುವಾರ ಕೂಡ ಮಳೆ ಸಾಧ್ಯತೆ
ಗುರುವಾರ ಕೂಡ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಬಿರು ಬೇಸಿಗೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದು ಸದ್ಯ ಮಳೆಯಾದರೆ ಸಾಕು ಎನ್ನುವ ಪರಿಸ್ಥಿತಿ ಇದೆ.
ಮಲೆನಾಡಿನಲ್ಲಿ ವರ್ಷದ ಮೊದಲನೆಯ ಮಳೆ. pic.twitter.com/EruTezTr25
— Vishal Goud (@vishaljgoud) April 3, 2024
ಚಿಕ್ಕಮಗಳೂರು ಜಿಲ್ಲೆಯಲ್ಲಿ 10 ದಿನಗಳ ಹಿಂದೆ ಮಳೆಯಾಗಿತ್ತು, ಅದಾದ ಬಳಿಕ ಕಾಣೆಯಾಗಿದ್ದ ಮಳೆ ಬುಧವಾರ ಮತ್ತೆ ದರ್ಶನ ನೀಡಿದೆ. ಇನ್ನೂ ಹಲವು ದಿನ ಉತ್ತಮ ಮಳೆಯಾದರೆ ಸಾಕು ಎನ್ನುವಂತಹ ಸ್ಥಿತಿ ಇಲ್ಲಿನ ರೈತರದ್ದಾಗಿದೆ.
ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಕಾಫಿ ಬೆಳೆ ಮೇಲೆ ಪರಿಣಾಮ ಬೀರಿದೆ. ಬೇಸಿಗೆಯಲ್ಲಿ ನೀರಿಗೆ ತೀವ್ರ ಹಾಹಾಕಾರ ಶುರುವಾಗಿದ್ದು, ರೈತರು ಮಳೆ ಬಂದ್ರ ಸಾಕಪ್ಪ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ.
ಏಪ್ರಿಲ್‌ನಲ್ಲಿ ಮಳೆಯಾಗುತ್ತಾ?
ಏಪ್ರಿಲ್ 13ರಿಂದ ಅಶ್ವಿನಿ ಮಳೆ ಆರಂಭವಾಗಲಿದೆ. ಏಪ್ರಿಲ್ 27ರವರೆಗೆ ಅಶ್ವಿನಿ ಮಳೆ ಇರಲಿದ್ದು, ರಾಜ್ಯದ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಚದುರಿಂದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಏಪ್ರಿಲ್ 27ರಂದು ಭರಣಿ ಮಳೆ ಶುರುವಾಗಲಿದ್ದು, ಈ ಮಳೆ ಸಾಮಾನ್ಯ ಮಳೆಯಾಗಲಿದೆ ಎಂದು ಹೇಳಲಾಗಿದೆ. ಆದರೆ ಮಳೆ ಬಂದು ಭೂಮಿ ತಂಪಾಗುವವರೆಗೂ ಈ ಬಿಸಿಲಿನ ತಾಪವನ್ನು ತಾಳುವುದೇ ಒಂದು ಸಾಹಸವಾಗಿದೆ. ಅಲ್ಲಲ್ಲಿ ಮಳೆಯಾಗುತ್ತಿರುವುದು ರಾಜ್ಯದ ಉಳಿದ ಕಡೆಗಳಲ್ಲಿ ಕೂಡ ಜನರಲ್ಲಿ ಮಳೆಯಾಗುವ ಬಗ್ಗೆ ಆಶಾಭಾವನೆ ಮೂಡಿಸಿದೆ.












Click it and Unblock the Notifications