ಬೆಳಗಾವಿ: ಹಿಂದೂ ಮಗನಿಗೆ ಲಿಂಗಾಯತ ಸಂಪ್ರದಾಯದಂತೆ ಅದ್ದೂರಿ ಮದುವೆ ಮಾಡಿಸಿದ ಮುಸ್ಲಿಂ ದಂಪತಿ
ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವ ಇಂದಿನ ಸಮಾಜದಲ್ಲಿ, ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಹುಕ್ಕೇರಿ ಪಟ್ಟಣದಲ್ಲಿ ನಡೆದ ಅಪರೂಪದ ವಿವಾಹವೊಂದು ನಿಜವಾದ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿದೆ. ತಬ್ಬಲಿಯಾಗಿದ್ದ ಇಬ್ಬರು ಹಿಂದೂ ಗಂಡುಮಕ್ಕಳನ್ನ ದತ್ತು ಪಡೆದು, ಅವರನ್ನು ತಮ್ಮ ಸ್ವಂತ ಮಕ್ಕಳಂತೆ ಬೆಳೆಸಿದ ಬೆಳಗಾವಿ ಮುಸ್ಲಿಂ ದಂಪತಿ ಇದೀಗ ತಮ್ಮ ದತ್ತುಪುತ್ರನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ತಬ್ಬಲಿ ಮಕ್ಕಳ ಪಾಲಿಗೆ ಆಸರೆಯಾದ ದಂಪತಿ
ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕ ಮೆಹಬೂಬ್ ಹಸನ್ ನಾಯ್ಕವಾಡಿ ಹಾಗೂ ಅವರ ಪತ್ನಿ ನೂರ್ ಜಹಾನ್ ಅವರೇ ಈ ಒಳ್ಳೆಯ ಕೆಲಸ ಮಾಡಿದ ದಂಪತಿ. ಸುಮಾರು 20 ವರ್ಷಗಳ ಹಿಂದೆ, ಮೆಹಬೂಬ್ ಅವರ ಸ್ನೇಹಿತ ಶಿವಾನಂದ್ ಕಡಯ್ಯ ಪೂಜೇರಿ ಎಂಬುವವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಸಮಯದಲ್ಲಿ ಅವರ ಇಬ್ಬರು ಪುಟ್ಟ ಗಂಡು ಮಕ್ಕಳಾದ ಸೋಮಶೇಖರ್ ಹಾಗೂ ವಸಂತ್ ಅನಾಥರಾದರು.

ಯಾವುದೇ ಸಂಬಂಧಿಕರು ಆಶ್ರಯ ನೀಡಲು ಮುಂದೆ ಬರದಿದ್ದಾಗ, ಮೆಹಬೂಬ್ ದಂಪತಿ ಆ ಮಕ್ಕಳನ್ನ ತಮ್ಮ ಮನೆಗೆ ಕರೆತಂದರು. ಆ ವೇಳೆಗಾಗಲೇ ಮೆಹಬೂಬ್ ದಂಪತಿಗೆ ತಮ್ಮದೇ ಆದ ಐವರು ಮಕ್ಕಳಿದ್ದರೂ, ಅವರ ಜೊತೆ ಈ ಇಬ್ಬರು ಮಕ್ಕಳನ್ನ ಯಾವುದೇ ಭೇದಭಾವವಿಲ್ಲದೆ ಸಮಾನ ಪ್ರೀತಿ ಕೊಟ್ಟು ಬೆಳೆಸಿದರು. ವಿಶೇಷವೆಂದರೆ, ಆ ಮಕ್ಕಳು ತಮ್ಮದೇ ಆದ ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳೊಂದಿಗೆ ಬೆಳೆಯುವಂತೆ ಕುಟುಂಬದಲ್ಲಿ ಮುಕ್ತ ವಾತಾವರಣ ಕಲ್ಪಿಸಿದ್ದರು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹುಕ್ಕೇರಿ ಮದುವೆ
ವರ್ಷಗಳು ಉರುಳಿದಂತೆ ಮಕ್ಕಳು ಬೆಳೆದು ನಿಂತರು. ಶಿಕ್ಷಣದಲ್ಲಿ ಗಮನಹರಿಸಿದ ಸೋಮಶೇಖರ್, ಬಿಎಸ್‌ಸಿ ಪದವೀಧರನಾಗಿದ್ದು, ಪ್ರಸ್ತುತ ಬೆಳಗಾವಿಯ ಏವಿಯೇಷನ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಮಗನಿಗೆ ವಿವಾಹದ ವಯಸ್ಸಾದಾಗ, ಮೆಹಬೂಬ್ ಮತ್ತು ನೂರ್ ಜಹಾನ್ ಹಿಂದೂ ವಧುವಿನ ಹುಡುಕಾಟ ನಡೆಸಿದರು.
ನಂತರ ಮಹಾರಾಷ್ಟ್ರದ ಗಡಿಂಗ್ಲಜ್ ತಾಲೂಕಿನ ತನ್ವಾಡ್ ಗ್ರಾಮದ ವೀರಶೈವ ಲಿಂಗಾಯತ ಕುಟುಂಬದ ಪೂನಮ್ ಎಂಬ ಯುವತಿಯೊಂದಿಗೆ ಸೋಮಶೇಖರ್ ಮದುವೆಯನ್ನ ನಿಶ್ಚಯಿಸಲಾಯಿತು. ಕಳೆದ ಫೆಬ್ರವರಿ 8ರಂದು ಹುಕ್ಕೇರಿಯಲ್ಲಿ ನಡೆದ ಈ ಮದುವೆಯಲ್ಲಿ, ಮುಸ್ಲಿಂ ದಂಪತಿಯೇ ಪೋಷಕರ ಸ್ಥಾನದಲ್ಲಿ ನಿಂತು, ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರವೇ ಮದುವೆಯನ್ನ ಅದ್ದೂರಿಯಾಗಿ ನೆರವೇರಿಸಿದರು. ಮದುವೆ ಮಂಟಪದ ಸ್ವಾಗತ ದ್ವಾರದಲ್ಲಿ ನಿಂತು, ಬಂದ ಎರಡೂ ಕಡೆಯ ಅತಿಥಿಗಳನ್ನ ಸತ್ಕರಿಸಿದರು.
When two orphaned boys lost their parents, a Muslim couple chose to become their family.
— The Better India (@thebetterindia) August 22, 2026
In Belagavi (Karnataka), Mehboob Hasan Naikwadi and Noor Jahan took in two brothers nearly 20 years ago after their parents died in a road accident.
Though the couple already had five… pic.twitter.com/0GgUdojOzN
ಮಾನವೀಯತೆಗೆ ಬೆಲೆ ಕಟ್ಟಲಾಗದು
"ನಾನು ಮತ್ತು ನನ್ನ ಪತ್ನಿ ಮಾಡಿರುವ ಕೆಲಸದಲ್ಲಿ ವಿಶೇಷವಾದದ್ದು ಏನೋ ಇದೆ ಎಂದು ನನಗನಿಸುವುದಿಲ್ಲ. ಈ ದೇಶದ ಎಲ್ಲ ಜನರೂ ಸಹೋದರ-ಸಹೋದರಿಯರು ಎಂಬುದು ನನ್ನ ನಂಬಿಕೆ. ಈ ಮಕ್ಕಳು ನನ್ನ ಮನೆಯಲ್ಲಿ ಬೆಳೆದು, ಶಿಕ್ಷಣ ಪಡೆದು, ಸ್ವಂತ ಕಾಲ ಮೇಲೆ ನಿಂತು ಉದ್ಯೋಗ ಕಂಡುಕೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ. ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ ಎಂಬ ತೃಪ್ತಿಯೊಂದಿಗೆ ನಾನು ಈ ಜಗತ್ತನ್ನು ಬಿಡಲಿದ್ದೇನೆ" ಎಂದು 70 ವರ್ಷ ದಾಟಿರುವ ಮೆಹಬೂಬ್ ನಾಯ್ಕವಾಡಿ ಅವರು ತಮ್ಮ ಮನದಾಳದ ಮಾತುಗಳನ್ನ ದಿ ಹಿಂದೂ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರಾದ ಬಸವಪ್ರಭು ವಂಟಮುರಿ ಅವರು ಈ ಸಂದರ್ಭದಲ್ಲಿ ಮಾತನಾಡಿ, "ಆಗಾಗ ಕೋಮು ಗಲಭೆಗಳನ್ನ ಕಾಣುತ್ತಿರುವ ಇಂದಿನ ಸಮಾಜಕ್ಕೆ ನಾಯ್ಕವಾಡಿ ದಂಪತಿಯ ಈ ಕಾರ್ಯ ಮಾದರಿಯಾಗಿದೆ" ಎಂದು ಶ್ಲಾಘಿಸಿದರು.


Click it and Unblock the Notifications
