Budget 2024: 'ಆಂಧ್ರಪ್ರದೇಶ, ಬಿಹಾರಕ್ಕೆ ಕೋಟಿ ಪ್ಯಾಕೇಜ್: ಕರ್ನಾಟಕಕ್ಕೆ ಚೊಂಬು'
ಬೆಂಗಳೂರು, ಜುಲೈ 24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವರು, ಕೇಂದ್ರ ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ 'ಕರ್ನಾಟಕ'ದ ಪ್ರಸ್ತಾಪವೇ ಇಲ್ಲ. ಬಜೆಟ್'ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂಬುದಕ್ಕೆ ಇದೇ ಸಾಕ್ಷಿ. ಆಂಧ್ರಪ್ರದೇಶಕ್ಕೆ 15,000 ಕೋಟಿ, ಬಿಹಾರಕ್ಕೆ 26,000 ಕೋಟಿ ಪ್ಯಾಕೇಜ್. ಕರ್ನಾಟಕಕ್ಕೆ ಸಿಕ್ಕಿದ್ದು ಮಾತ್ರ 'ಚೊಂಬು'.

ರಾಜ್ಯಕ್ಕೆ ಯಾವ ಹೊಸ ಯೋಜನೆಗಳ ಪ್ರಸ್ತಾಪವೂ ಇಲ್ಲ. ಹಳೆ ಯೋಜನೆಗಳಿಗೆ ಅನುದಾನವಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಏಮ್ಸ್ ಮೆಡಿಕಲ್ ಕಾಲೇಜಿನ ಪ್ರಸ್ತಾಪವಿಲ್ಲ. ಒಟ್ಟಾರೆ ಕರ್ನಾಟಕದ ಬಗ್ಗೆ ಮಾತೇ ಇಲ್ಲ.
ಇನ್ನು ಉದ್ಯೋಗಿಗಳಿಗೆ ಆದಾಯ ತೆರಿಗೆ ವಿನಾಯಿತಿ ಇಲ್ಲ. ಬಡವರಿಗೆ ರೈತರಿಗೆ ಯಾವ ವಿಶೇಷ ಯೋಜನೆಗಳೂ ಇಲ್ಲ. ಮೋದಿ ಸರ್ಕಾರದ ಬಜೆಟ್ ಎಂದಿನಂತೆ ಶ್ರೀಮಂತರ ಪರ ಹಾಗು ಬಡವರ, ತೆರಿಗೆ ಪಾವತಿದಾರರ ವಿರೋಧಿ ಬಜೆಟ್ ಆಗಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಮಿತ್ರಪಕ್ಷಗಳ ಓಲೈಕೆಗೆ ಸಾವಿರಾರು ಕೋಟಿ ಮೀಸಲಿಟ್ಟ ಬಜೆಟ್ ಆಗಿದೆ ಎಂದಿದ್ದಾರೆ.

ಕೇಂದ್ರ ಕರ್ನಾಟಕದ ಜನತೆಗೆ ನಿರಾಸೆ ಮಾಡಿದ್ದಾರೆ- ಸಿಎಂ ಸಿದ್ದರಾಮಯ್ಯ
ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಚೊಂಬು ಕೊಟ್ಟಿದ್ದಾರೆ, ಕರ್ನಾಟಕಕ್ಕೆ ಪಂಗನಾಮ ಹಾಕಿದ್ದಾರೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋದವರು. ಕರ್ನಾಟಕದ ಹಿತ ಕಾಪಾಡಿ, ನ್ಯಾಯ ಕೊಡ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕರ್ನಾಟಕದ ಜನತೆಗೆ ನಿರಾಸೆ ಮಾಡಿದ್ದಾರೆ.
ವಿಪತ್ತು ಪರಿಹಾರ ನಿಧಿ ಹೆಚ್ಚಳಕ್ಕೆ ಮನವಿ ಮಾಡಿದ್ದೆವು, ಆ ಬಗ್ಗೆ ಏನನ್ನೂ ಘೋಷಿಸಿಲ್ಲ. ನೀರಾವರಿ ಯೋಜನೆಗಳ ಅನುಷ್ಠಾನದ ನಿರೀಕ್ಷೆಯಲ್ಲಿದ್ದೇವು, ಅದನ್ನೂ ಮಾಡಿಲ್ಲ. ಆಂಧ್ರಪ್ರದೇಶ-ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ, ಬೇರೆ ರಾಜ್ಯಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಏಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯಬೇಕಾದರೆ ಆ ರಾಜ್ಯಗಳ ಸಹಕಾರ ಬೇಕು, ಅದಕ್ಕಾಗಿ ವಿಶೇಷ ಅನುದಾನವನ್ನು ಕೊಟ್ಟಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications