ಬಿ. ಎಸ್. ಯಡಿಯೂರಪ್ಪಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಎಚ್‌ಡಿಕೆ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 27; ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಹಲವಾರು ನಾಯಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಹಿನ್ನಲೆಯಲ್ಲಿ ಯಡಿಯೂರಪ್ಪ ಸೋಮವಾರ ಶಿವಮೊಗ್ಗದಲ್ಲಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಎಚ್. ಡಿ. ಕುಮಾರಸ್ವಾಮಿ, 'ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರಿಗೆ ಆ ಭಗವಂತ ಆಯುರಾರೋಗ್ಯ ಕರುಣಿಸಲಿ ಹಾಗೂ ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವ ಚೈತನ್ಯ ದಯಪಾಲಿಸಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.

ಇಂದು ಬಿ. ಎಸ್. ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟುಹಬ್ಬ. ಹುಟ್ಟು ಹಬ್ಬದ ದಿನದಂದೇ ಅವರ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿದೆ. ಇದು ಅವರಿಗೆ ಹುಟ್ಟು ಹಬ್ಬದ ಕೊಡುಗೆಯಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರಿಗೆ ಆ ಭಗವಂತ ಆಯುರಾರೋಗ್ಯ ಕರುಣಿಸಲಿ ಹಾಗೂ ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವ ಚೈತನ್ಯ ದಯಪಾಲಿಸಲಿ ಎಂದು ಹಾರೈಸುತ್ತೇನೆ.@BSYBJP pic.twitter.com/0VgSo8ip5w
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 27, 2023

ಬಿ. ಎಸ್. ಯಡಿಯೂರಪ್ಪ ಸೋಮವಾರ ಬೆಳಗ್ಗೆ ಶಿವಮೊಗ್ಗ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಟ್ವೀಟ್ ಮಾಡಿದ್ದು, 'ಪೂಜ್ಯ ತಂದೆಯವರಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರ ಹುಟ್ಟಿದ ಹಬ್ಬದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಸುದೀರ್ಘ ಆಯಸ್ಸು , ಆರೋಗ್ಯ, ನೆಮ್ಮದಿ ಹಾಗೂ ಯಶಸ್ಸನ್ನು ಕೋರಿ ಪ್ರಾರ್ಥಿಸಲಾಯಿತು' ಎಂದು ಹೇಳಿದ್ದಾರೆ.
ಮೋದಿ ಆಗಮನ ಸಂತಸ; ಶಿವಮೊಗ್ಗದಲ್ಲಿ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, "ನನ್ನ ಹುಟ್ಟುಹಬ್ಬದ ವೇಳೆ ಸ್ವತಃ ಮೋದಿ ಆಗಮಿಸುತ್ತಿರುವುದು ವಿಶೇಷ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮಾತನಾಡಿ, "ಇಡೀ ರಾಜ್ಯಾದ್ಯಂತ ಬಿಎಸ್‌ವೈ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮರೆಯಲಾರದ ಕ್ಷಣವಾಗಿದೆ. ಶಿವಮೊಗ್ಗ ಏರ್‌ಪೋರ್ಟ್ ಯಡಿಯೂರಪ್ಪ ಅವರ ಕನಸು. ಇದನ್ನು ಮೋದಿ ಉದ್ಘಾಟನೆ ಮಾಡುತ್ತಿರುವುದು ನಮ್ಮ ಸೌಭಾಗ್ಯ" ಎಂದರು.












Click it and Unblock the Notifications