'Compete with China' ಮೋದಿಗಿಂತ ಎಚ್‌ಡಿಕೆ ಬೆಟರ್: ಇಲ್ಲಿದೆ ಸಾಕ್ಷಿ!
ಬೆಂಗಳೂರು, ಜೂ. 20: ಭಾರತ-ಚೀನಾ ಗಡಿಯಲ್ಲಿ ಘರ್ಷಣೆ ಶುರುವಾಗುತ್ತಿದ್ದಂತೆಯೆ ದೇಶದಲ್ಲಿ ಸ್ವದೇಶಿ ಮಂತ್ರ ಮತ್ತೆ ಜೋರಾಗಿಯೆ ಕೇಳಿ ಬರುತ್ತಿದೆ. ಆದರೆ ಈ ಮಂತ್ರ ಜಪಿಸಲು ಪೂರ್ವ ತಯಾರಿಯನ್ನು ನಾವು ಮಾಡಿಕೊಂಡಿದ್ದೇವಾ ಎಂಬುದನ್ನು ನೋಡಿದರೆ ಎದುರಿಗೆ ಕಾಣುತ್ತಿರುವುದು ದೊಡ್ಡ ಶೂನ್ಯ ಮಾತ್ರ. ನಮ್ಮಲ್ಲಿರುವ ಚೀನಾ ವಸ್ತುಗಳನ್ನು ನಾಶ ಮಾಡುವುದರಿಂದ ಚೀನಾವನ್ನು ದುರ್ಬಲಗೊಳಿಸುವುದು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಮಾರುಕಟ್ಟೆಯ ಬಹುಭಾಗವನ್ನು ಚೀನಾದ ಅಗ್ಗದ ಉತ್ಪನ್ನಗಳು ದಶಕಗಳ ಹಿಂದೆಯೆ ಆಕ್ರಮಿಸಿಕೊಂಡಿವೆ. ಇದರಿಂದಾಗಿ ನಮ್ಮ ದೇಶದ ಗುಡಿ ಕೈಗಾರಿಕೆ ಈಗಾಗಲೇ ನಶಿಸಿ ಹೋಗಿದ್ದು, ದೇಶಿಯ ಬಹುತೇಕ ಸಣ್ಣಪುಟ್ಟ ಉದ್ಯಮಗಳು ಮುಚ್ಚುವ ಹಂತದಲ್ಲಿದೆ.
ಚೀನಾ ವಸ್ತುಗಳ ಬಹಿಷ್ಕಾರ ಸುಲಭದ ಮಾತಲ್ಲ: ಮಾಜಿ ಸಿಎಂ ಎಚ್‌ಡಿಕೆ
ಹಾಗಾದರೆ ಚೀನಾದೊಂದಿಗೆ ಸ್ಪರ್ಧೆ ಮಾಡಲು ನಾವು ಚಿಂತನೆಯನ್ನೇ ಮಾಡಿಲ್ಲವಾ? ಚಿಂತನೆ ಅಷ್ಟೇ ಅಲ್ಲ, ಯೋಜನೆಯೇ ಸಿದ್ಧಗೊಂಡಿತ್ತು. ಆದರೆ ಅದನ್ನು ಮುಂದುವರೆಸಿ ಅನುಷ್ಠಾನ ಮಾಡಲಿಲ್ಲ. ಹಾಗಾದರೆ ಆ ಯೋಜನೆ ಏನು? ಯಾವಾಗ ಜಾರಿಗೆ ಬಂದಿತ್ತು? ಏನೆಲ್ಲಾ ಸಿದ್ಧತೆಗಳು ನಡೆದಿದ್ದವು? ಯೋಜನೆಯ ರೂಪುರೇಷೆಗಳೇನು? ಚೀನಾದೊಂದಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಸೆಣೆಸಲು ಸ್ವದೇಶಿ ಮಂತ್ರ ಜಪಿಸುತ್ತಿರುವ ಬಿಜೆಪಿಯ ಕೊಡುಗೆ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೀನಾದೊಂದಿಗೆ ಸ್ಪರ್ಧೆ
ಅಗ್ಗದ ಚೀನಾ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ವರ್ಷಗಳೇ ಕಳೆದಿವೆ. ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾದಾಗೆಲ್ಲ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವ ಚರ್ಚೆ ದೇಶದಲ್ಲಿ ಶುರುವಾಗುತ್ತದೆ. ಕಾಲ ಕಳೆದಂತೆ ಮತ್ತೆ ಮರೆತು ಹೋಗುತ್ತದೆ. ಆದರೆ 2018ರಲ್ಲಿ ಚೀನಾ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ನಮ್ಮ ದೇಶದಲ್ಲಿ, ಅದರಲ್ಲೂ ನಮ್ಮ ರಾಜ್ಯದಲ್ಲಿಯೇ ಶುರುವಾಗಿತ್ತು ಎಂಬುದು ಸತ್ಯ.
ಚೀನಾ ದೇಶದ ಎದುರು ಕೇಂದ್ರ ಸರ್ಕಾರದ ಬದಲು ನಮ್ಮ ರಾಜ್ಯ ಸರ್ಕಾರವೇ ಯೋಜನೆ ರೂಪಿಸಿತ್ತು. ಚೀನಾದ ಅಗ್ಗದ ಉತ್ಪನ್ನಗಳೊಂದಿಗೆ ನಿರ್ಣಾಯಕ ಹೋರಾಟಕ್ಕೆ ಮೈತ್ರಿ ಸರ್ಕಾರದಲ್ಲಿ ಆಗಿನ ಸಿಎಂ ಎಚ್.ಡಿ. ಕುಮಾರಸ್ವಾಮಿ "ಚೀನಾದೊಂದಿಗೆ ಸ್ಪರ್ಧೆ' ಎಂಬ ಪರಿಕಲ್ಪನೆಯೊಂದಿಗೆ ಹೊಸ ಯೋಜನೆ ರೂಪಿಸಿದ್ದರು.

"ಕಾಂಪೀಟ್ ವಿತ್ ಚೀನಾ'
ಕಳೆದ 2018ರಲ್ಲಿ ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚೀನಾದೊಂದಿಗೆ ಸ್ಪರ್ಧಿಸಲು ಪ್ರಯತ್ನ ನಡೆದಿತ್ತು. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು "Comepte with China' (ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ) ಯೋಜನೆ ಜಾರಿಗೆ ತಂದಿದ್ದರು.
ಮೈತ್ರಿ ಸರ್ಕಾರದ ಮೊದಲ ಮಧ್ಯಂತರ ಬಜೆಟ್‌ನಲ್ಲಿ ಕಾಂಪೀಟ್ ವಿತ್ ಚೀನಾ ಯೋಜನೆಯನ್ನು ಅಂದಿನ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಚೀನಾ ಗೊನ್‌ಶಾವ್ ಹಾಗೂ ಫೊಶಾನ್ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವ ವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತದೆ. ಅದರಿಂದಾಗಿ ಜಗತ್ತಿನ ಸಮಾನ್ಯ ಜನರಿಗೂ ಪೀಠೋಪಕರಣ, ಆಟಿಕೆ ಸಾಮಾನು, ಸೌರಶಕ್ತಿ ಉತ್ಪನ್ನಗಳು, ಲೈಟಿಂಗ್ಸ್ ಅತ್ಯಂತ ಅಗ್ಗದ ದರಕ್ಕೆ ಪೈಪೋಟಿ ಕೊಡಲಾಗದೆ ದೇಶಿಯ ಉದ್ಯಮ ನಾಶವಾಗಿವೆ ಎಂದು ಬಜೆಟ್ ಭಾಷಣದಲ್ಲಿ ಆಗಿನ ಸಿಎಂ ಎಚ್‌ಡಿಕೆ ಹೇಳಿದ್ದರು.
Fake: Tik Tok ಸೇರಿದಂತೆ ಚೀನಿ App Remove ಮಾಡಿ: ಸರ್ಕಾರ

ಬಜೆಟ್‌ನಲ್ಲಿ ಘೊಷಣೆ
ದೇಶಿಯ ಮಾರುಕಟ್ಟೆ ವ್ಯಾಪಿಸಿಕೊಂಡಿದ್ದ ಚೀನಾ ಉತ್ಪನ್ನಗಳಿಗೆ ಸ್ಪರ್ಧೆ ಮಾಡಲು ಅನಕೂಲವಾಗುವಂತೆ ಯೋಜನೆ ರೂಪಿಸಿದ್ದರು. ಇದಕ್ಕಾಗಿ 2018ರ ಜುಲೈ 5 ರಂದು ಎಚ್‌ಡಿಕೆ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಯೋಜನೆಯನ್ನು ಘೋಷಣೆ ಮಾಡಿದ್ದರು. ಚೀನಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಕೊಡುವಂಥ ಉತ್ನನ್ನಗಳನ್ನು ಹಳ್ಳಿಗಳ ಮಟ್ಟದಲ್ಲಿ ಉತ್ಪಾದಿಸಿ, ಅವುಗಳನ್ನು ತಾಲೂಕು ಮಟ್ಟದಲ್ಲಿ ಜೋಡಣೆ ಮಾಡಿ ಜಿಲ್ಲಾ ಕೇಂದ್ರಗಳಲ್ಲಿ ಮಾಲ್‌ಗಳನ್ನು ತೆರೆದು ಮಾರಾಟ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.

ಒಂಭತ್ತು ವಲಯಗಳು
ಯೋಜನೆ ರೂಪುರೇಷೆ ತಯಾರಿಸಲು 5 ನೂರು ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿತ್ತು. ಮೊದಲ ಹಂತದಲ್ಲಿ 9 ಜಿಲ್ಲೆಗಳಲ್ಲಿ 9 ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿತ್ತು. ಪ್ರತಿ ವಲಯದಲ್ಲಿ ಕನಿಷ್ಠ 5 ಸಾವಿರ ಕೋಟಿ ರೂ. ಗಳ ಹೂಡಿಕೆ ಮಾಡುವುದು. ಆ ಮೂಲಕ ಪ್ರತಿ ವಲಯದಲ್ಲಿ ಕನಿಷ್ಠ 1 ಲಕ್ಷ ಉದ್ಯೋಗ ಸೃಷ್ಟಿಯೊಂದಿಗೆ ಎಲ್ಲ 9 ವಲಯಗಳಲ್ಲಿ 9 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದು 'ಕಾಂಪೀಟ್ ವಿತ್ ಚೀನಾ' ಯೋಜನೆಯ ಮೂಲ ಉದ್ದೇಶವಾಗಿತ್ತು.
ಕಲಬುರಗಿ ವಲಯದಲ್ಲಿ ಚೀನಾ ವಸ್ತುಗಳಿಗೆ ಪೈಪೋಟಿ ಕೊಡುವಂತೆ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿರುವ ಬಿಡಿ ಭಾಗಗಳು. ಅಂದರೆ ಸೋಲಾರ್ ಪ್ಯಾನಲ್, ಇನ್ವರ್ಟರ್, ಕೆಪ್ಯಾಸಿಟರ್‌ಗಳು, ಲುಮಿನೇಟರ್‌ಗಳನ್ನು ಕಲಬುರಗಿ ಜಿಲ್ಲೆಯಲ್ಲಿಯೇ ಉತ್ಪಾದನೆ ಮಾಡುವುದು.
ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ ಎಲ್‌ಇಡಿ ಲೈಟ್‌ಗಳನ್ನು ಉತ್ಪಾದಿಸುವ ಉದ್ಯಮವನ್ನು ಅಭಿವೃದ್ಧಿ ಪಡಿಸುವ ಗುರಿ ಯೋಜನೆ ಹಾಕಿಕೊಳ್ಳಲಾಗಿತ್ತು. ಹಾಸನ ಜಿಲ್ಲೆಯನ್ನು ಸ್ನಾನಗೃಹ, ನೆಲಹಾಸು ಹಾಗೂ ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುವುದು ಯೋಜನೆಯ ಗುರಿಯಾಗಿತ್ತು.
ಚೀನಾ ಆಟಿಕೆಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ತಯಾರಿಕಾ ಉದ್ಯಮ ಹುಟ್ಟುಹಾಕುವ ಗುರಿ, ಮೈಸೂರು ಜಿಲ್ಲೆಯಲ್ಲಿ ICB ಚಿಪ್‌ಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು, ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಭಾಗಗಳ ತಯಾರಿಕೆಯ ಉದ್ಯಮ ಹಾಗೂ ತುಮಕೂರು ಜಿಲ್ಲೆಯಲ್ಲಿ ಸ್ಪೋರ್ಟ್ಸ ಮತ್ತು ಫಿಟ್‌ನೆಸ್ ವಸ್ತುಗಳ ತಯಾರಿಕೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿತ್ತು. ಜೊತೆಗೆ ಬೀದರ್ ಜಿಲ್ಲೆಯಲ್ಲಿ ಯಂತ್ರೋಪಕರಣಗಳ ಉತ್ಪಾದನೆಗೆ ಯೋಜನೆ ನಿಗದಿ ಮಾಡಲಾಗಿತ್ತು.

ತರಬೇತಿ ಶಾಲೆ
ಚೀನಾದೊಂದಿಗೆ ಸ್ಪರ್ಧೆ ಮಾಡುವುದು ಸುಲಭದ ಮಾತಾಗಿಲ್ಲ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಹೀಗಾಗಿ ಉದ್ಯಮ ಆರಂಭಿಸುವ ಮೊದಲು 6 ತಿಂಗಳಿನಿಂದ 2 ವರ್ಷಗಳ ಅವಧಿಯ ತರಬೇತಿಯನ್ನು ಕೆಲಸಗಾರರಿಗೆ ಕೊಡಲು ತೀರ್ಮಾನ ಮಾಡಲಾಗಿತ್ತು. ಅದಕ್ಕಾಗಿ ಮೊದಲ ಹಂತದಲ್ಲಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಲಾಗಿತ್ತು.
ತರಬೇತಿ ಶಾಲೆ ತೆರೆಯಲು ಹಾಗೂ ತರಬೇತಿ ಕೊಡಲು 5 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿತ್ತು. ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತಿ ಜಿಲ್ಲೆಯ ವಲಯಕ್ಕೆ ತಲಾ 2 ಸಾವಿರ ಕೋಟಿ ರೂ.ಗಳ ಇಕ್ವಿಟಿ ಷೇರು ಬಂಡವಾಳ ರೂಪದಲ್ಲಿ ಉದ್ಯಮದಲ್ಲಿ ಭಾಗವಹಿಸುವ ಖಾಸಗಿ ಸಂಸ್ಥೆಗಳಿಗೆ ಕೊಡುವ ಉದ್ಧೇಶವಿತ್ತು. ಜೊತೆಗೆ ಖಾಸಗಿಯವರು ಪ್ರತಿ ಜಿಲ್ಲೆಯಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಆಹ್ವಾನಿಸಲಾಗಿತ್ತು.

ವಿಶನ್ ಗ್ರೂಪ್ ರಚನೆ
ಬಜೆಟ್‌ನಲ್ಲಿ ಘೊಷಣೆಯಾಗಿದ್ದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯದ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಪ್ರತಿ ವಲಯಕ್ಕೂ ಯೋಜನಾ ಗುರಿ ಘಟಕ (ಪ್ರೋಗ್ರಾಂ ಮಿಷನ್ ಯೂನಿಟ್) ಸ್ಥಾಪಿಸಲಾಗಿತ್ತು.
ಪ್ರತಿಯೊಂದು ವಸ್ತುಗಳ ಉತ್ಪಾದನೆಗೆ ಸಂಬಂಧಿಸಿದಂತೆ ರಚನೆಯಾಗಿದ್ದ ವಿಷನ್ ಗ್ರೂಪ್ ಸದಸ್ಯರು ಕ್ಲಸ್ಟರ್‌ಗಳಿಗೆ ಭೇಟಿ ನೀಡಿ, ಜಾಗ ಗುರುತಿಸಿದ್ದರು. ಮೂಲಸೌಕರ್ಯ ಕುರಿತಂತೆ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಕ್ಲಸ್ಟರ್ಗಳ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯಗಳ ವರದಿಯನ್ನು ಸಿದ್ಧಪಡಿಸಲಾಗಿತ್ತು. ಯಾವ ಕೈಗಾರಿಕೆಗಳಿಗೆ ಏನು ಕೊಡಬೇಕು? ರಿಯಾಯಿತಿ ಅಗತ್ಯವಿದೆ? ನಿರುದ್ಯೋಗಿಗಳಿಗೆ ಹೇಗೆ ತರಬೇತಿ ಕೊಡಬೇಕು? ಕೌಶಲಾಭಿವೃದ್ಧಿಗೆ ಯಾವ ರೀತಿಯ ತರಬೇತಿ ಬೇಕಾಗುತ್ತದೆ ಎಂಬ ವರದಿಯನ್ನು ವಿಷನ್ ಗ್ರೂಪ್‌ಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು.

ಖಾಸಗಿಯವರಿಂದ ಹೂಡಿಕೆ
ಎಚ್.ಡಿ. ಕುಮಾರಸ್ವಾಮಿ ಅವರು ಮಧ್ಯಂತರ ಬಜೆಟ್ ಮಂಡಿಸಿದ 6 ತಿಂಗಳುಗಳ ಬಳಿಕ 2019-20ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದರು. ಅದಕ್ಕೂ ಮೊದಲೇ ಕಾಂಪೀಟ್ ವಿತ್ ಚೀನಾ ಯೋಜನೆಯಡಿ ರಾಜ್ಯದ 3 ಜಿಲ್ಲೆಗಳಲ್ಲಿ ಹೂಡಿಕೆ ಮಾಡಲು ಖಾಸಗಿ ಉದ್ಯಮಿಗಳು ಮುಂದೆ ಬಂದಿದ್ದರು ಎಂದು 2019-20ನೇ ಸಾಲಿನ ಬಜೆಟ್ ಭಾಷಣದಲ್ಲಿ ಸಿಎಂ ಕುಮಾಸ್ವಾಮಿ ಅವರು ಹೇಳಿದ್ದರು.
ಕಾಂಪೀಟ್ ವಿತ್ ಚೀನಾ ಯೋಜನೆಯಡಿ ಕೊಪ್ಪಳ, ಬಳ್ಳಾರಿ ಹಾಗೂ ಕೋಲಾರ ಜಿಲ್ಲೆಗಳ ಕ್ಲಸ್ಟರ್‌ಗಳಲ್ಲಿ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಉಳಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಅಂದಿನ ಸಿಎಂ ಎಚ್‌ಡಿಕೆ ಗುರಿ ಹಾಕಿಕೊಂಡಿದ್ದರು. ಆದರೆ ಅದಾದ ಬಳಿಕ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಆಮೇಲೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಯೋಜನೆ ಕೈಬಿಟ್ಟ ಬಿಜೆಪಿ
ಕಾಂಪೀಟ್ ವಿತ್ ಚೀನಾ ಯೋಜನೆಯನ್ನು ಬಜೆಟ್‌ನಿಂದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿತು. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಮಂಡನೆ ಮಾಡಿದ್ದ 2020-21 ಬಜೆಟ್‌ನಲ್ಲಿ ಕಾಂಪೀಟ್ ವಿತ್ ಚೀನಾ ಯೋಜನೆ ಸಂಪೂರ್ಣ ಮಾಯವಾಗಿತ್ತು. ಅದನ್ನು ಈಗ ಮತ್ತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಈಗ ಯೋಜನೆ ಏನಾಗಿದೆ?
ಗಡಿಯಲ್ಲಿ ಅಮಾಯಕರ ಬಲಿದಾನದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರಾವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷ ವಾಕ್ಯದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು.
ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ ‘Compete With China' ಎಂಬ ಯೋಜನೆಯನ್ನು ನಾನು ಸಿಎಂ ಆದಾಗ ರೂಪಿಸಿದ್ದೆ.
ಸ್ಥಳೀಯರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವುದು, ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರೆಸಿಕೊಂಡು ಹೋಗಿದೆಯೋ ಇಲ್ಲವೋ ತಿಳಿಯದು ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉತ್ತರಿಸುವ ಗೋಜಿಗೆ ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಾಗಲಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಾಗಲಿ ಹೋಗಿಲ್ಲ.

ಭಾವನಾತ್ಮಕವಾಗಿ ಯುದ್ಧ ಗೆಲ್ಲಲು ಆಗಲ್ಲ
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಭಾರತ್ ಮಂತ್ರವನ್ನು ಜಪಿಸುತ್ತಿದ್ದಾರೆ. ಆದರೆ ಅದಕ್ಕೆ ಮಾಡಿಕೊಂಡಿರುವ ತಯಾರಿಯನ್ನು ನೋಡಿದರೆ ಎದುರಿಗೆ ಶೂನ್ಯ ಕಾಣುತ್ತಿದೆಯಷ್ಟೇ. ಬಹುದೊಡ್ಡ ದೇಶದ ಸಣ್ಣ ರಾಜ್ಯ ಕರ್ನಾಟಕ ಚೀನಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿತ್ತು. ಆದರೆ ಅಂತಹ ಯಾವುದೇ ಯೋಜನೆಗಳ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರದಿರುವುದು ವಿಪರ್ಯಾಸ.
ಭಾವನೆಗಳಿಂದ ಚುನಾವಣೆಯನ್ನು ಗೆಲ್ಲಬಹುದು, ವೈರಿ ರಾಷ್ಟ್ರವನ್ನಲ್ಲ ಎಂಬುದನ್ನು ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರಿತುಕೊಳ್ಳಬೇಕಿದೆ. ಕುತಂತ್ರಿ ಚೀನಾವನ್ನು ಹಣೆಯಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರೂಪಸಿದ್ದ ಯೋಜನೆಯ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಂಡರೆ, ಗಡಿಯಲ್ಲಿ ದೇಶ ಕಾಯುತ್ತಿರುವ ನಮ್ಮ ಸೈನಿಕರು ಮತ್ತಷ್ಟು ಕೆಚ್ಚೆದೆಯಿಂದ ಹೋರಾಡುತ್ತಾರೆ!