ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಲು ವೈದ್ಯರಿಗೆ ಕುಮಾರಸ್ವಾಮಿ ಮನವಿ
ಬೆಂಗಳೂರು, ಜೂನ್ 17: ವೈದ್ಯರ ಮೇಲೆ ಹಲ್ಲೆ ಖಂಡನೀಯ, ಆದರೆ ವೈದ್ಯರು ಮುಷ್ಕರ ನಿರತರಾದರೆ ಸಹಸ್ರಾರು ರೋಗಿಗಳಿಗೆ ತೊಂದರೆಯಾಗುತ್ತದೆ, ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳಿ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ಸಮರ್ಥನೀಯ ಅಲ್ಲ, ಹಾಗೂ ವೈದ್ಯರು ಕೂಡ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ತಮ್ಮ ಖಾಸಗಿ ಖಾತೆಯಲ್ಲಿ ವೈದ್ಯರ ಮುಷ್ಕರ ಕುರಿತು ಟ್ವಿಟ್ ಮಾಡಿರುವ ಅವರು, ವೈದ್ಯರ ಮೇಲಿನ ಹಲ್ಲೆಯನ್ನು ಯಾರು ಒಪ್ಪುವುದಿಲ್ಲ, ನಾನು ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ವೈದ್ಯರು ಕರೆ ನೀಡಿರುವ ಪ್ರತಿಭಟನೆ ಶಾಂತಿಯುತವಾಗಿರಲಿ, ಯಾವುದೇ ಸಮಸ್ಯೆಗಳು ಸೃಷ್ಟಿಯಾಗದಂತಿರಲಿ ಮತ್ತು ರೋಗಿಗಳಿಗೆ ಯಾವುದೇ ತೊಂದರೆಯಾಗದಂತಿರಲಿ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗಿದೆ. ಮುಷ್ಕರವನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ಕೂಡಲೇ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕು.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈಗೆ ಕಪ್ಪುಬಟ್ಟೆ ಧರಿಸಿ ವಿದ್ಯಾರ್ಥಿಗಳು ಬೀದಿಗಿಳಿಸಿದ್ದಾರೆ.
ಇನ್ನು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಕೂಡ ಪ್ರತಿಭಟನೆ ಮುಂದುವರೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications