ಲೋಕಸಭೆ ಚುನಾವಣೆಗೆ ನಿಖಿಲ್ ಸ್ಪರ್ಧಿಸಲ್ಲ ಎಂದ ಕುಮಾರಸ್ವಾಮಿ: ಕುಟುಂಬ ರಾಜಕಾರಣಕ್ಕೆ ಇತಿಶ್ರೀ?
ಬೆಂಗಳೂರು, ಆಗಸ್ಟ್ 28: ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲನ್ನು ಅನುಭವಿಸಿದೆ. ಕೇವಲ 19 ಸ್ಥಾನಗಳನ್ನು ಪಡೆಯುವ ಮೂಲಕ ಭಾರೀ ಆಘಾತ ಅನುಭವಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ರಾಮನಗರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಎಚ್‌ಡಿಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಕುಟುಂಬ ರಾಜಕಾರಣದ ಆಪಾದನೆಯಿಂದ ಹೊರಬರಲು ಎಚ್‌ಡಿ ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಶಂಕೆಗಳು ವ್ಯಕ್ತವಾಗಿದೆ. ಇತ್ತೀಚೆಗೆ ರಚನೆಯಾದ 21 ಸದಸ್ಯರ ಕೋರ್ ಕಮಿಟಿಯಿಂದ ಕುಟುಂಬ ಸದಸ್ಯರನ್ನು ಎಚ್‌ಡಿಕೆ ಹೊರಗಿಟ್ಟಿದ್ದಾರೆ. ಇಷ್ಟೇ ಅಲ್ಲದೇ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈ ವಿಚಾರವಾಗಿ ಮಂಡ್ಯದಲ್ಲಿ ಸೋಮವಾರ ಮಾತನಾಡಿರುವ ಅವರು, ಮುಂದಿನ ಐದು ವರ್ಷಗಳ ಕಾಲ ನಿಖಿಲ್ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
'ಮಂಡ್ಯ ಲೋಕಸಭಾ ಅಭ್ಯರ್ಥಿ ಆಯ್ಕೆಗೆ ಇನ್ನೂ ಸಮಯವಿದೆ. ಇನ್ನು ನಿಖಿಲ್ ವಿಚಾರಕ್ಕೆ ಬಂದರೆ ರಾಜಕೀಯ ಬಿಟ್ಟು ಚಿತ್ರರಂಗದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದ್ದೇನೆ. ಈಗಾಗಲೇ ಎರಡು ಚುನಾವಣೆಗಳಲ್ಲಿ ಆತ ಸೋತಿದ್ದಾನೆ. ಕಳೆದ ಬಾರಿ ಮಂಡ್ಯದಲ್ಲಿ ಸ್ಪರ್ಧಿಸಬೇಡ ಎಂದು ಹೇಳಿದ್ದೆ. ಆತನ ಸ್ಪರ್ಧಿಸಲು ಸಿದ್ದನಿರಲಿಲ್ಲ. ಆದರೆ, ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡಬೇಕಾಯಿತು' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗೆಲುವು ಮತ್ತು ಸೋಲು ನಮ್ಮ ಜೀವನದ ಭಾಗವಾಗಿದೆ. ಸದ್ಯದ ಸ್ಥಿತಿಯಲ್ಲಿ ಆತನಿಗೆ ಮನ್ನಣೆ ಸಿಕ್ಕಿರುವ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ತಿಳಿಸಿದ್ದೇನೆ. ಏನೇ ಆದರೂ ಮುಂದಿನ ಐದು ವರ್ಷಗಳಲ್ಲಿ ಆತ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅದರ ಬಗ್ಗೆ ನಿರ್ಧರಿಸಲು ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಕಳೆದ ಬಾರಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಅದು ನಮಗೆ ಸಹಾಯ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೆ ಮಂಡ್ಯದಲ್ಲಿ ಗೆಲ್ಲುತ್ತಿದ್ದೆವು. ನಮಗೀಗ ನಾಲ್ಕು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2019 ರಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ವತಂತ್ರ ಅಭ್ಯರ್ಥಿ ಸುಮಲತಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2024ರಲ್ಲಿ ಮಂಡ್ಯದಿಂದ ನಿಖಿಲ್ ಮತ್ತೆ ಕಣಕ್ಕಿಳಿಯಬಹುದು ಎಂಬ ವದಂತಿಗಳಿದ್ದವು. ಆದರೆ ಕುಮಾರಸ್ವಾಮಿ ಆ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಅಲ್ಲಿ ಅವರು ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಎಚ್‌ಡಿ ದೇವೇಗೌಡರ ಕುಟುಂಬದಲ್ಲಿ ಈಗ ಐವರು ಚುನಾಯಿತ ಪ್ರತಿನಿಧಿಗಳಿದ್ದಾರೆ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರು. ದೇವೇಗೌಡರ ಹಿರಿಯ ಪುತ್ರ ರೇವಣ್ಣ ಹೊಳೆನರಸೀಪುರ ಶಾಸಕರು. ರೇವಣ್ಣ ಅವರ ಪುತ್ರ ಪ್ರಜ್ವಲ್ ಹಾಸನ ಲೋಕಸಭಾ ಸಂಸದರಾಗಿದ್ದಾರೆ. ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ ಎಂಎಲ್‌ಸಿಯಾಗಿದ್ದಾರೆ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಹಾಸನದಿಂದ ಶಾಸಕ ಟಿಕೆಟ್ ರೇಸ್‌ನಲ್ಲಿದ್ದರು.












Click it and Unblock the Notifications