HD Kumaraswamy: ಜಿಬಿಎ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ: ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಹಾಸನ: ಜಿಬಿಎ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ ರಾಜ್ಯ ಸರ್ಕಾರ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಕ್ಷ ಇದುವರೆಗೂ ಇವಿಎಂ ಬಗ್ಗೆ ಚರ್ಚೆ ಮಾಡಿಲ್ಲ. ಬ್ಯಾಲೆಟ್ ಪೇಪರ್ ಬಗ್ಗೆನೂ ಚರ್ಚೆ ಮಾಡಿಲ್ಲ. ಚರ್ಚೆ ಮಾಡುತ್ತಿರುವವರು ಯೋಚನೆ ಮಾಡಬೇಕು, ಕಾಂಗ್ರೆಸ್‌ನವರು ಇವಿಎಂ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಾನು ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳುತ್ತೇನೆ. ನೀವು 135 ಸ್ಥಾನ ಗೆದ್ದರಲ್ಲಾ, ಇವಿಎಂ ಮೂಲಕ ಗೆದ್ದರಾ ಅಥವಾ ಬ್ಯಾಲೆಟ್ ಪೇಪರ್ ಬಳಸಿ ಗೆದ್ದರಾ? ಜನತೆಗೆ ಹೇಳಿ ಎಂದರು.
ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಸಹಕಾರಿ ಸಂಸ್ಥೆಗಳ ಚುನಾವಣೆ ನಡೆದಿದೆ. ಈಗಿನ ಕಾಂಗ್ರೆಸ್ ಸರ್ಕಾರ ಆ ಚುನಾವಣೆಗಳಲ್ಲಿ ಬೆಳಗ್ಗೆ ಮತದಾನ ಮಾಡಲು ಹೋಗುವವರ ಪವರ್‌ನ್ನು ಹಿಂದಿನ ದಿನ ಮಧ್ಯರಾತ್ರಿ ಕಿತ್ತು ಹಾಕಿದೆ. ಉದಾಹರಣೆಗೆ ನಮ್ಮ ಪಕ್ಷದ ಶಾಸಕ ಬೋಜೇಗೌಡರೇ ಇದ್ದಾರೆ. ಇಂತಹ ಕೀಳುಮಟ್ಟದಲ್ಲಿ ಕಾನೂನುಬಾಹಿರ ಕೆಲಸ ಮಾಡಿ ಕೋ-ಆಪರೇಟಿವ್ ಸೊಸೈಟಿ ಗೆದ್ದಿದ್ದೇವೆ ಎನ್ನುತ್ತಾರೆ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಬಿಗಿಯಾಗಿ ಇರುವುದರಿಂದ ಎಲ್ಲಾ ಉಳಿದುಕೊಂಡಿದೆ. ಬೇರೆ ಕಡೆ ಯಾವ ರೀತಿ ಚುನಾವಣೆ ನಡೆಸಿದ್ದಾರೆ ನೋಡಿದ್ದೇನೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಆಂತರಿಕ ಕಚ್ಚಾಟ ಕಾರಣದಿಂದ ರಾಜ್ಯದ ಅಭಿವೃದ್ಧಿ ಸೊರಗುತ್ತಿದೆ. ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಸಿಎಂ ಕುರ್ಚಿ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ಆದರೆ, ಇಡೀ ದೇಶದಲ್ಲಿ ಇಂತಹ ಕೆಟ್ಟ ಸರ್ಕಾರ ಇನ್ನೊಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ಯಾವ ಸೀಮೆ ಅಹಿಂದ ನಾಯಕರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಕುರ್ಚಿಯ ಕಲಹದಲ್ಲಿ ಐದು ಕಡೆ ಅಹಿಂದ ಸಮಾವೇಶ ನಡೆಸಲು ಹೊರಟಿದ್ದಾರೆ ಸಿಎಂ ಬೆಂಬಲಿಗರು. ಮುಖ್ಯಮಂತ್ರಿ ಮತ್ತು ಅಹಿಂದ ಸಂಘಟನೆಗಳಿಗೆ ಒಂದು ಪ್ರಶ್ನೆ ಕೇಳುತ್ತೇನೆ. 2023, 2024, 2025 ಈ ಮೂರು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 1,64,000 ಹಿಂದುಳಿದ ಮುತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಕ್ಕಿಲ್ಲ. ಯಾಕೆ ಕೊಡಲಾಗಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಅಹಿಂದ ಹೆಸರಿನಲ್ಲಿ ಸಿಎಂ ಕುರ್ಚಿ ಗಟ್ಟಿಗೊಳಿಸಿಕೊಳ್ಳಲು ಆ ಸಮುದಾಯಗಳನ್ನು ಉಪಯೋಗ ಮಾಡಿಕೊಂಡು ಬಂದಿದ್ದೀರಿ. ಕಳೆದ ಮೂರು ವರ್ಷದಿಂದ ಆ ಸಮುದಾಯದ ಮಕ್ಕಳಿಗೆ ಹಣ ಬಿಡುಗಡೆ ಮಾಡದೆ ವಂಚನೆ ಮಾಡಿದ್ದೀರಿ. ಆರ್ಥಿಕ ಇಲಾಖೆ ಲೋಪದೋಷದಿಂದ ಹಣ ಕೊಟ್ಟಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆರ್ಥಿಕ ಇಲಾಖೆ ಯಾರ ಕೈಯಲ್ಲಿದೆ? ಈ ಸರ್ಕಾರ ಅಹಿಂದ ವರ್ಗದವರಿಗೆ ದ್ರೋಹ ಮಾಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಸರ್ಕಾರ ಯಾವ ಮಟ್ಟದಲ್ಲಿ ನಡೆಯುತ್ತಿದೆ? ಎನ್ನುವುದನ್ನು ಈ ಪ್ರಕರಣವೇ ಹೇಳುತ್ತದೆ. ಕರೆಯಮ್ಮ ಅವರದ್ದು ಒಬ್ಬರಎಲೆ ಅಷ್ಟೇ ಅಲ್ಲ, ಪ್ರತಿನಿತ್ಯ ಒಂದಲ್ಲ ಒಂದು ಬೆದರಿಕೆ, ಧಮ್ಕಿ.ಪ್ರಕಾರಗಳು ನಡೆಯುತ್ತಿವೆ. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿದ ರಾಜೀವ್‌ಗೌಡ ಬಂಧನ ಆಗಿಲ್ಲ.ಇನ್ನೂ ಬಂಧಿಸುವುದರಲ್ಲೇ ಇದ್ದಾರೆ. ಗೃಹಸಚಿವರು ನಿನ್ನೆಯೂ ಹೇಳಿದ್ದಾರೆ, ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ಪಡುತ್ತಿದ್ದಾರೆ ಎಂದು. ಜಾಮೀನು ಅರ್ಜಿ ಬಗ್ಗೆ ಕೋರ್ಟ್ ಆದೇಶ ಏನು ಬರುತ್ತೆ ಎಂದು ನೋಡಿಕೊಂಡು ಬಂಧಿಸಬೇಕೋ ಅಥವಾ ಬೇಡವೋ ಎಂಬುದು ನಿರ್ಧಾರವಾಗುತ್ತದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆ ಜನತಾದಳಕ್ಕೆ ಶಕ್ತಿಯನ್ನು ತುಂಬಿರುವ ತಂದೆ ತಾಯಂದಿರ ನೆಲ. ಈ ಜಿಲ್ಲೆ ನಮ್ಮ ಪಕ್ಷಕ್ಕೆ ಕರ್ಮಭೂಮಿ. ನಮಗೆ ಶಕ್ತಿ ಕೊಟ್ಟಿರುವ ಜಿಲ್ಲೆ ಇದು. ಈ ಜಿಲ್ಲೆಯ ಮೂಲಕ ಪಕ್ಷ ಸಂಘಟನೆಗೆ ಹೊಸದಾಗಿ ಚಾಲನೆ ನೀಡುತ್ತಿದ್ದೇವೆ. 2028ರ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಪವಿತ್ರವಾದ ಪುಣ್ಯ ಭೂಮಿಯಿಂದ ಸಂಘಟನೆ ಮಾಡುತ್ತಿದ್ದೇವೆ. ವಿಶೇಷವಾಗಿ ಜನತಾದಳದ ಕುಟುಂಬದ ಸಂಘಟನೆಗೆ ಚಾಲನೆ ಕೊಟ್ಟು ಸಂದೇಶ ಕೊಡುವ ಕಾರ್ಯಕ್ರಮ ಇದಾಗಿದೆ ಎಂದರು.












Click it and Unblock the Notifications