ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಕ್ಕೆ ಅಪಾಯ ಇರುವುದು ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ: ಎಚ್‌.ಡಿ. ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು ಮೇ 27: ಕುಟುಂಬ ರಾಜಕಾರಣದ ನೆಪವೊಡ್ಡಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ತಂತ್ರ ಫಲಿಸದು. ಭಾರತವೆಂದರೆ; ಬಿಜೆಪಿಯಷ್ಟೇ ಅಲ್ಲ, 140 ಕೋಟಿಗೂ ಹೆಚ್ಚು ಭಾರತೀಯರು ಸೇರಿದರೆ ಮಾತ್ರ ಭಾರತ. ಪ್ರಧಾನಿಗಳು ಈ ಆಶಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು ಎಂದು ನಿನ್ನೆ ಹೈದರಾಬಾದ್ʼನಲ್ಲಿ ಹೇಳಿಕೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಪ್ರಧಾನಿ ಅವರ ಹೇಳಿಕೆ ಕರ್ನಾಟಕದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲ, ಹಣಕ್ಕಾಗಿ ಮುಖ್ಯಮಂತ್ರಿ ಪದವಿ ಸೇಲ್ ವಿಚಾರ, ಭ್ರಷ್ಟಾಚಾರ, ಭಾವುಕ ವಿಷಯಗಳಿಂದ ಸಮಾಜದಲ್ಲಿ ಒಡಕು ಉಂಟು ಮಾಡುವ ವಿಷಯಗಳನ್ನು ಇಟ್ಟುಕೊಂಡು ತಿರುಗೇಟು ನೀಡಿದ್ದಾರೆ.

"ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು." ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಉಪದೇಶವಿದು. ವಾಸ್ತವ ಗುರುತಿಸಿ, ಬಿಜೆಪಿ ಬೆಳವಣಿಗೆಯ ಹಿನ್ನೆಲೆ ಅರಿತು ಅವರು ಭಾಷಣ ಮಾಡಬೇಕಿತ್ತು. ಕೇವಲ ಚುನಾವಣಾ ಪ್ರಚಾರ ಶೈಲಿಯ ಭಾಷಣ ಮಾಡಿದ್ದಾರಷ್ಟೇ.

ಕುಟುಂಬ ಪಕ್ಷಗಳ ಟೀಕೆ ನೆಪವಷ್ಟೇ. ಪ್ರಧಾನಿಯವರ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ. ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ. ಇಂಥ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಏನೆಲ್ಲ ಅಡ್ಡದಾರಿ ಹಿಡಿಯಿತು ಎನ್ನುವುದು ಗುಟ್ಟೇನಲ್ಲ.

ಜೆಪಿ ಹೋರಾಟದ ಫಲ ಜನಸಂಘ

ಜೆಪಿ ಹೋರಾಟದ ಫಲ ಜನಸಂಘ

ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಹೋರಾಟದ ಫಲಗಳಲ್ಲಿ ಜನಸಂಘವೂ ಒಂದು. ತುರ್ತು ಪರಿಸ್ಥಿತಿ ಹೇರಿದಾಗ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನೂರಾರು ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸಿದ್ದು ಅವರೇ. ಇವೆಲ್ಲಾ ಒಟ್ಟಾಗಿ ʼಜನತಾ ಪರಿವಾರʼ ಉದಯ ಆಯಿತು. ಈ ಪರಿವಾರ ಹಂತಹಂತವಾಗಿ ಬೆಳೆದು ಹೆಮ್ಮರವಾಗಿ, ಕ್ರಮೇಣ ಅನೇಕ ಟಿಸಿಲುಗಳೊಡೆದು ಬೇರೆ ಬೇರೆಯಾಯಿತು. ಬಿಜೆಪಿಯೂ ಈ ಪರಿವಾರದ ಒಂದು ತುಣುಕಷ್ಟೇ. ಜೆಡಿಎಸ್, ಜೆಡಿಯು, ಆರ್ʼಜೆಡಿ, ಬಿಜೆಡಿ, ಸಮಾಜವಾದಿ ಪಕ್ಷಗಳೆಲ್ಲ ಈ ಮಹಾವೃಕ್ಷದ ರೆಂಬೆ-ಕೊಂಬೆಗಳೇ. ಜನತಾ ಪರಿವಾರದ ಟಿಸಿಲುಗಳು ದೇಶದ ಉದ್ದಗಲಕ್ಕೂ ಬೃಹತ್ ವೃಕ್ಷಗಳಾಗಿ ಬೆಳೆದು ನಿಂತಿವೆ. ಅವುಗಳ ಬೇರುಗಳು ಆಳಕ್ಕಿಳಿದು ಬಲಿಷ್ಠವಾಗಿವೆ; ಕೀಳುವುದು, ಅಲ್ಲಾಡಿಸುವುದು ಸುಲಭವಲ್ಲ. ಮೋದಿ ಅವರಿಗೆ ಈ ವಿಷಯವೂ ತಿಳಿಯದ್ದೇನಲ್ಲ. ಜನಸಂಘ ಬಿಜೆಪಿಯಾಗಿ ರೂಪಾಂತರಗೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದು ತನ್ನ ಸ್ವಂತ ಶಕ್ತಿಯಿಂದೇನಲ್ಲ. ಇದೇ ಕುಟುಂಬ ಕೇಂದ್ರಿತ ಪಕ್ಷಗಳ ಊರುಗೋಲಿನಿಂದ. NDA ಹುಟ್ಟಿದ್ದು ಹೇಗೆ? ಹುಟ್ಟಿದಾಗ ಎಷ್ಟು ಪಕ್ಷಗಳಿದ್ದವು? ಈಗೆಷ್ಟಿವೆ? ಈ ಮಾಹಿತಿ ಮೋದಿ ಅವರ ಮನದಲ್ಲಿ ಇರಬೇಕಿತ್ತು.

ಬಿಜೆಪಿ ಸೀಟು ಎಷ್ಟರಿಂದಾರಂಭವಾಯಿತು?

ಬಿಜೆಪಿ ಸೀಟು ಎಷ್ಟರಿಂದಾರಂಭವಾಯಿತು?

ಲೊಕಸಭೆಯಲ್ಲಿ ಈಗ ಬಿಜೆಪಿಗೆ 303 ಸೀಟುಗಳಿವೆ. ಆದರೆ, ಎಷ್ಟು ಸೀಟುಗಳಿಂದ ಈ ಅಂಕಿ ಆರಂಭವಾಯಿತು? ಆ ಪಕ್ಷದ ಪ್ರಯಾಣ ಶುರುವಾಗಿದ್ದು ಎಲ್ಲಿಂದ? ಮೊದಲಿನದ್ದೆಲ್ಲವನ್ನೂ ಮೋದಿ ಮರೆತರೆ ಹೇಗೆ? ಈಗಲೂ ಅವರು ಟೀಕಿಸಿದ ಕುಟುಂಬ ಕೇಂದ್ರಿತ ಪಕ್ಷಗಳು NDA ಕೂಟದಲ್ಲಿವೆಯಲ್ಲಾ!! ಇತ್ತೀಚೆಗೆ, ನಿತ್ಯವೂ ಕುಟುಂಬ ರಾಜಕಾರಣ-ಭ್ರಷ್ಟಾಚಾರದ ಬಗ್ಗೆ ಹೇಳುವ ಅವರ ಪಕ್ಷದಲ್ಲೇ ಇರುವ ʼವಂಶವೃಕ್ಷದ ಘೋಂಡಾರಣ್ಯ & ಭ್ರಷ್ಟಾಚಾರʼ ಕೂಪದ ಬಗ್ಗೆ ಅವರೇಕೆ ದಿವ್ಯಮೌನ ವಹಿಸುತ್ತಾರೆ! ಕರ್ನಾಟಕದಿಂದ ಹಿಡಿದು, ವಿಂಧ್ಯ ಪರ್ವತದ ಆಚೆಗೂ ಬಿಜೆಪಿಗರ ಕುಟುಂಬಗಳ ಕುಲಕಸುಬು ರಾಜಕೀಯವೇ ಆಗಿ, ಭ್ರಷ್ಟಾಚಾರವು ಅವರ ನಿತ್ಯ ಆಚಾರ ಆಗಿದೆ.

ಅಪಾಯ ಇರುವುದು ಕುಟಂಬವಾದಿ ಪಕ್ಷಗಳಿಂದಲ್ಲ

ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ.ʼ ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮಾನ್ಯ ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ.

ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಆಹಾರ, ವ್ಯಾಪಾರ ಇತ್ಯಾದಿಗಳ ಮೂಲಕ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದ ಭಾರತದ ಭಾವೈಕ್ಯತೆಯ ಬುಡಕ್ಕೆ ಕೊಡಲಿ ಹಾಕಿದವರು ಯಾರು? ಪ್ರಜಾಸತ್ತೆಯ ಅಖಂಡ ರಕ್ಷಕನಾದ ಸಂವಿಧಾನಕ್ಕೇ ಅಪಚಾರವೆಸಗಿ ʼಆಪರೇಷನ್ ಕಮಲʼವೆಂಬ ಅನೈತಿಕ ರಾಜಕಾರಣ ಆರಂಭ ಮಾಡಿದ್ದು ಯಾರು?

ಕಿರಾತಕ ರಾಜಕಾರಣಕ್ಕೆ ಮೋದಿ ಮೌನಸಮ್ಮತಿ

ʼಆಪರೇಷನ್ ಕಮಲವನ್ನೇ ರಾಷ್ಟ್ರೀಕರಣʼ ಮಾಡಿದ ಕಿರಾತಕ ರಾಜಕಾರಣಕ್ಕೆ ಮೌನಸಮ್ಮತಿ ತೋರಿದವರು ಮೋದಿ ಅವರಲ್ಲವೇ? ಜನಾದೇಶದಂತೆ ರಚನೆಯಾಗಿದ್ದ ಮಧ್ಯಪ್ರದೇಶದ ಸರಕಾರವನ್ನು ಕೆಡವಿದ್ದು ಇವರ ಪಕ್ಷವೇ ಅಲ್ಲವೆ? ಒಂದೆಡೆ: ಸಂಸತ್ತು-ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ! ಇನ್ನೊಂದೆಡೆ; ಆಪರೇಷನ್ ಕಮಲದ ಮೂಲಕ ಸಂವಿಧಾನದ ಶಿರಚ್ಛೇಧ!! ಇದೆಂಥಾ ರಾಜಕಾರಣ? ಇದು ರಾಷ್ಟ್ರೀಯವಾದಿ ಪಕ್ಷದ ಸೋಗಲಾಡಿತನ.

ಕರ್ನಾಟಕದಲ್ಲಿ ಎರಡು ಸಲ ಬಿಜೆಪಿ ಸರಕಾರ ಬಂದಿದ್ದು ಹೇಗೆ? ರಾಜಮಾರ್ಗದಲ್ಲಿ ಬಂತಾ? ಇಲ್ಲ, ಶಾಸಕರನ್ನು ಸಂತೆಯಲ್ಲಿ ರಾಸುಗಳಂತೆ ನಿರ್ಲಜ್ಜವಾಗಿ ಖರೀದಿಸಿದ್ದರಿಂದಲೇ ಬಂದ ʼಅಕ್ರಮ ಸರಕಾರʼವಿದು!! ಪ್ರಧಾನಿಯವರು ಇದನ್ನು ನಿರಾಕರಿಸುತ್ತಾರಾ? ಮೋದಿ ಅವರು ಈ ನೀತಿಹೀನ ಸರಕಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದು ಸುಳ್ಳಾ? ಕೋಟಿ ಕೋಟಿ ಲೂಟಿ ಹೊಡೆದು ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಎಗರಿಸಿಕೊಂಡು ಹೋಗಿದ್ದು ದೇಶಕ್ಕೆ ಒಳ್ಳೆಯದಾ? ಯುವಜನರಿಗೆ ದಾರಿದೀಪವಾ? ಈ ಬಗ್ಗೆ ಮೋದಿ ಅವರ ಮನ್ ಕೀ ಬಾತ್ ಮೌನವಾಗಿದೆ! ಏಕೆ?

ರೂ.2,500 ಕೋಟಿ ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ

ರೂ.2,500 ಕೋಟಿ ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ

ಮುಖ್ಯಮಂತ್ರಿ ಸ್ಥಾನವನ್ನು ಕರ್ನಾಟಕದಲ್ಲಿ ಮಾರಾಟಕ್ಕೆ ಇಟ್ಟಿದ್ದು ಯಾರು? ಕುಟುಂಬ ರಾಜಕಾರಣದ ಪಕ್ಷವೋ? ಬಿಜೆಪಿಯೋ? "ರೂ.2,500 ಕೋಟಿ ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ" ಎಂದು ಕೇಳಿದ ಪಾರ್ಟಿ ಬಿಜೆಪಿ. ಇದನ್ನು ಹೇಳಿದ್ದು ನಾವಲ್ಲ, ಸ್ವತಃ ಬಿಜೆಪಿ ಶಾಸಕರೇ!! ಆ ಶಾಸಕರ ಮೇಲೆ ಶಿಸ್ತುಕ್ರಮ ಇರಲಿ, ಒಂದು ನೊಟೀಸನ್ನೂ ಕೊಡಲಿಲ್ಲ. ಹೋಗಲಿ.. ಮೋದಿ ಅವರೂ ಸಿಎಂ ಕರ್ಚಿ ಮಾರಾಟದ ಬಗ್ಗೆ ಮಾತನಾಡಲಿಲ್ಲ. ಈ ಘನಘೋರ ಆರೋಪದ ಬಗ್ಗೆಯೂ ಅವರದ್ದು ಮುಂದುವರಿದ ಮೌನ! ಅಲ್ಲಿಗೆ ಶಾಸಕರ ಹೇಳಿಕೆ ಸತ್ಯ ಎಂದಾಯಿತಲ್ಲ. ಪಿಎಸ್ʼಐ ಹುದ್ದೆಗಳಂತೆ ಸಿಎಂ ಪದವಿಯನ್ನೂ ಮಾರಿಕೊಳ್ಳುವುದು ದೇಶಕ್ಕೆ ಸೌಭಾಗ್ಯವಾ? ಯುವಕರಿಗೆ ಆದರ್ಶವಾ? ಎಂದು ಅವರು ಟ್ವೀಟ್ ಮಾಡಿದ್ದಾರೆ.

Recommended Video

ಮಹಿಳೆಗೆ ನ್ಯಾಯ ಕೊಡಿಸಲು ಪೊಲೀಸರಿಗೇ ಹೇಗೆ ವಾರ್ನಿಂಗ್ ಕೊಟ್ಟಿದ್ದಾರೆ ನೋಡಿ CM ಯೋಗಿ |#Politics|Oneindia Kannada

English summary
Former CM HD Kumaraswamy Reaction to PM Narendra Modi's Family-run parties biggest enemies of nation statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X