90 ಮಂದಿಗೆ ಸಂಪುಟ ದರ್ಜೆ; ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ: ಮಾಜಿ ಸಿಎಂ
ಬೆಂಗಳೂರು, ಫೆಬ್ರವರಿ 12: ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಾದ ರಾಜ್ಯಪಾಲರ ಭಾಷಣದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಎಂದು ಕಿಡಿಕಾರಿದರು.

90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ. ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ! ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ!! ಕರ್ನಾಟಕ ಹಣಕಾಸು ಸಂಸ್ಥೆ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ? ಎಂದು ಪ್ರಶ್ನಿಸಿದರು.
ಬರಕ್ಕೆ ತುತ್ತಾದ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ. ಆದರೆ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಏನೆಂದು ಕರೆಯಬೇಕು? ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಪ್ರತೀ ವರ್ಷ ನಡೆಯುವ ಶಾಸ್ತ್ರವಷ್ಟೇ. ಪ್ರತಿ ವರ್ಷದ ಸಂಪ್ರದಾಯದಂತೆ ವಿಧಾನಸಭೆ ಕಲಾಪಗಳು ನಡೆಯುತ್ತವೆ. ಸರಕಾರದ ಮುಂದಿನ ವರ್ಷದ ನೀಲನಕ್ಷೆ ಹಾಗೂ ಸಾಧನೆಗಳ ನೋಟವನ್ನು ಕೊಡಬೇಕು. ಅದನ್ನು ಮಾಡದ ಕೆಲಸಗಳ ಬಗ್ಗೆ ಡಂಗುರ ಹೊಡೆಯುವ ಕೆಲಸ ಅಷ್ಟೇ ಆಯಿತು. ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರಿಂದ ಭಾಷಣ ಕೇಳಿದ್ದೇವೆ. ಆದರೆ, ಈ ಭಾಷಣ ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವ ರೀತಿಯಲ್ಲಿದೆ ಎಂದು ಟೀಕಿಸಿದರು.
ಇವರಿಗೆ ಸ್ಪಷ್ಟ ಬಹುಮಯದ ಸರಕಾರ ಕೊಟ್ಟಿದ್ದಾರೆ ಜನ. ಆದರೆ, ಇವರು ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಕೇವಲ ಜನರಿಗೆ ಸರಿಯಾಗಿ ತಲುಪದ ಗ್ಯಾರೆಂಟಿಗಳ ಬಗ್ಗೆ ಗೌರವಾನ್ವಿತ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದು ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದ್ದೇವೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಈಗಲೂ ಅಲ್ಲಿಯೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಏನಾಯಿತು, ಎಲ್ಲಿಗೆ ಬಂತು? ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಲೇಬೇಡಿ ಎನ್ನುವಂತೆ ಇದೆ ಪರಿಸ್ಥಿತಿ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸರಕಾರ ನುಡಿದಂತೆ ನಡೆದಿದ್ದರೆ ನಾನು ಖಂಡಿತಾ ಮೆಚ್ಚುತ್ತಿದ್ದೆ. ಆದರೆ ಇವರು ಎಲ್ಲಿಯೂ ನುಡಿದಂತೆ ನಡೆದಿಲ್ಲ. ಅದಕ್ಕೆ ನಾನು ಹೇಳಿದ್ದು, ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಖಾರ ಉಳಿ ಇಲ್ಲಾ ಎಂದು. ಇದರ ನಾನು ಏನು ಮಾತಾಡಲಿ? ಹದಿನೈದು ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯನವರು, ಎರಡನೇ ಮುಖ್ಯಮಂತ್ರಿ ಆದವರು ರಾಜ್ಯಪಾಲರಿಂದ ಮಾಡಿಸುವ ಭಾಷಣವೇ ಇದು? ಇದು ಅತ್ಯಂತ ಕಳಪೆ ಭಾಷಣ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.












Click it and Unblock the Notifications