Caste Census: ಜಾತಿ ಗಣತಿ ವರದಿಗೆ ನನ್ನ ಒಪ್ಪಿಗೆ ಇಲ್ಲ, ಒಕ್ಕಲಿಗರ ಸಂಖ್ಯೆ ಅಚ್ಚರಿ ಎಂದ ಹೆಚ್‌ಡಿಕೆ
ರಾಜ್ಯ ಸರ್ಕಾರ ಜಾರಿಗೆ ಮುಂದಾಗಿರುವ ಜಾತಿ ಗಣತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೂಡ ಜಾತಿ ಗಣತಿ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿ ಹಳೇ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು? ಇದೇನು ಜಾತಿಗಣತಿಯೋ? ದ್ವೇಷಗಣತಿಯೋ? ಎಂದು ಕುಟುಕಿದ್ದಾರೆ.
ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕಿ-ಸಂಖ್ಯೆ ಅಷ್ಟೇ ಅಲ್ಲ, ವೀರಶೈವ ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪೆನ್ನೂ ಪೇಪರ್ ಕೊಟ್ಟ ಪಾಪಕ್ಕೆ ಒಕ್ಕಲಿಗ ಸಮಾಜ ಬೆಲೆ ತೆರುತ್ತಿದೆ. ಕುರ್ಚಿ ದುರಾಸೆಗೆ ಈ ವ್ಯಕ್ತಿ ಅದೇ ಪೆನ್ನಿನಲ್ಲಿ ಸಮಾಜದ ಮರಣಶಾಸನ ಬರೆಯುತ್ತಿದ್ದಾರೆ. ಈ ವರದಿಗೆ ನನ್ನ ಒಪ್ಪಿಗೆ ಇಲ್ಲ. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಾನು ಶತಸಿದ್ಧ ಎಂದು ಸವಾಲ್ ಹಾಕಿದ್ದಾರೆ. ಜಾತಿ ಗಣತಿ ಗಜಪ್ರಸವ ತಥಂಗಕ್ಕೆ ಸಂಪುಟದಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ, ಕಂಕುಮ ಹಚ್ಚಿ ಕಡ್ಡಿ ಹಚ್ಚಲಾಗಿದೆ. ಆ ವರದಿಯದ್ದು ಎನ್ನಲಾದ ಅಂಕಿ-ಅಂಶಗಳು ಎಲ್ಲೆಡೆ ತೇಲಾಡುತ್ತಿವೆ. ಯಾವುದೋ ಅಜ್ಞಾತ ಕೈ ಅದನ್ನು ವ್ಯವಸ್ಥಿತವಾಗಿ ತೇಲಿಬಿಟ್ಟಿದೆ ಎಂದು ಮಾರ್ಮಿಕವಾಗಿ ದೂರಿದ್ದಾರೆ.

ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಲು ಹೂಡಿದ ಷಡ್ಯಂತ್ರ್ಯವೇ? ಅಥವಾ ಸರಣಿ ದರ ಏರಿಕೆ, ಸಾಲು ಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆಗೆ ಹೊರಳಿಸಲು ರೂಪಿಸಿದ ಸಂಚೇ? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇಡೀ ರಾಜ್ಯವು ಜಾತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರದ ಈ ನಡೆ ಕೆಲ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವೇ? ಮುಖ್ಯಮಂತ್ರಿ ಕುರ್ಚಿ ಹತ್ತಲು ಚಾತಕ ಪಕ್ಷಿಯಂತೆ ನಿದ್ದೆಗೆಟ್ಟು, "ಒಂದ್ ಸಲ ನಂಗೂ ಪೆನ್ನೂ-ಪೇಪರ್ ಕೊಡಿ" ಎಂದು ಸಮುದಾಯದ ಮುಂದೆ ಮಂಡಿಯೂರಿ ಗೋಗರೆದ ವ್ಯಕ್ತಿ ಸಿದ್ದಷಡ್ಯಂತ್ರ್ಯ ವರದಿಗೆ ಶಿರಬಾಗಿ ಸಮ್ಮತಿಸಿಸುವರೇ? ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಹಿಂದೊಮ್ಮೆ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ, ಶಿವ.. ಶಿವಾ.. ಎಂದು ವ್ಯಂಗ್ಯವಾಡಿದ್ದಾರೆ. "ನಾನ್ ಒಂದು ನ್ಯಾಷನಲ್ ಪಾರ್ಟಿ ಸ್ಟೇಟ್ ಪ್ರೆಸಿಡೆಂಟ್ ಕಣ್ರೀ, ನಂಗೆ ಎಲ್ರೂ ಸಮಾನ! ಈಗಷ್ಟೇ ಕಣ್ ತೆರೆದಿದ್ದೇವೆ. ಗಣತಿಗೆ ಯಾರ ವಿರೋಧವೂ ಇಲ್ಲ, ವಿರೋಧವಾದ್ರೂ ಯಾಕಿರುತ್ತೆ ಹೇಳಿ?ʼ ಎಂದು ಹೇಳಿ ಪ್ರಶ್ನಿಸಿದ ಸುದ್ದಿಗಾರರನ್ನೇ ತಳ್ಳಿಕೊಂಡು ಪಲಾಯನಗೈದರಲ್ಲಾ? ಎಂದು ಕುಟುಕಿದ್ದಾರೆ.
ಡಿಕೆಶಿ ಹೇಳಿದ್ದೇನು?: ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ಶಾಸಕರ ಜೊತೆಗೆ ಚರ್ಚಿಸಿ ಯಾರ ಮನಸ್ಸನ್ನೂ ನೋಯಿಸದೆ, ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ. ನಮ್ಮದು ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ. ಸಮಾಜದಲ್ಲಿ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೋ ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications