ಧರ್ಮಸ್ಥಳದಲ್ಲಿ ಆಣೆ ಮಾಡಲು ಎಚ್‌ಡಿ ಕುಮಾರಸ್ವಾಮಿ ಆಹ್ವಾನಿಸಿದ್ದು ಯಾರಿಗೆ?
ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ಜಿಡಿಎಸ್ ನಾಯಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಎಚ್‌ಡಿಕೆ ತಿರುಗೇಟು ಕೊಟ್ಟಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರು ಸವಾಲು ಹಾಕಿದ್ದಾರೆ. ಈ ವಿಚಾರಕ್ಕೆ ಗುರುವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸೇರಿದಂತೆ ಎಲ್ಲ ಸಚಿವರು ಆಣೆ ಮಾಡಲಿ. ಧರ್ಮಸ್ಥಳಕ್ಕೆ ಬಂದು ಕಳೆದ ಐದು ತಿಂಗಳಲ್ಲಿ ವರ್ಗಾವಣೆಯಲ್ಲಿ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಎಂದು ಆಣೆ ಮಾಡಲಿ ಎಂದು ಆಹ್ವಾನ ನೀಡಿದರು.

ಶಾಸಕ ಬಾಲಕೃಷ್ಣ ಅವರ ಸವಾಲ್ ನಾನು ಸ್ವೀಕಾರ ಮಾಡುತ್ತೇನೆ. ಅದರಂತೆ ನನ್ನ ಸವಾಲನ್ನು ಅವರು ಸ್ವೀಕಾರ ಮಾಡಲಿ. ನಾನು, ನನ್ನ ಕುಟುಂಬ ಸರ್ಕಾರದ ಹಣವನ್ನು ಲೂಟಿ ಮಾಡಿಲ್ಲ. ಅಧಿಕಾರಿಗಳ ನಿಯೋಜನೆಯಲ್ಲಿ ಹಣಕ್ಕೆ ಅವಕಾಶ ನೀಡಿಲ್ಲ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ತಾಯಿ ಚಾಮುಂಡೇಶ್ವರಿ ಸನ್ನಿದಿ ಎಲ್ಲೇ ಆದರೂ ನಾನು ಆಣೆ ಮಾಡಲು ಸಿದ್ಧ ಎಂದು ಹೇಳಿದರು.
ಹಣ ಖರ್ಚಿನ ಬಗ್ಗೆ ಎಚ್‌ಡಿಕೆ ಸ್ಪಷ್ಟನೆ
ಚುನಾವಣೆ ವೇಳೆ ನಮ್ಮ ಮನೆ ಹಣ ಖರ್ಚು ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಸದನದಲ್ಲಿಯೇ ಈ ಮಾತನ್ನು ಹೇಳಿದ್ದೇನೆ. ನಮ್ಮ ಕೆಲಸ ನೋಡಿ ಕೆಲವರು ನೀಡಿದ ದೇಣಿಗೆಯಿಂದ ಪಕ್ಷ ಕಟ್ಟಿದ್ದೇನೆ. ಚುನಾವಣೆ ಎದುರಿಸಿದ್ದೇನೆ. ಇಂಥ ಪಾಪದ ಹಣದಿಂದ ಚುನಾವಣೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಸರ್ಕಾರ ಬಂದು ಐದು ತಿಂಗಳಾಗಿದೆ. ಈ ಅವಧಿಯಲ್ಲಿ ಸರ್ಕಾರ ಏನು ಮಾಡಿದೆ ಎನ್ನುವುದು ಗೊತ್ತಿದೆ. ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರು ನಾವು ವರ್ಗಾವಣೆಯಲ್ಲಿ 5 ತಿಂಗಳ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಎಂದು ಆಣೆ ಮಾಡಲಿ. ಲೂಟಿ ಹೊಡೆದಿದ್ದೇ ಹೊಡೆದಿದ್ದು. ಇಡೀ ಜಗತ್ತಿಗೆ ಅದು ಗೊತ್ತಿದೆ ಎಂದು ಕುಟುಕಿದರು.

ನಮ್ಮ ಸರ್ಕಾರದಲ್ಲಿ ಈ ಅಕ್ರಮ ನಡೆದಿಲ್ಲ
ನಮ್ಮ ಸರ್ಕಾರ ಇದ್ದಾಗ ಪೊಲೀಸರ ವರ್ಗಾವಣೆ, ಎಂಜಿನಿಯರ್ ಗಳ ಬಡ್ತಿ ಸೇರಿ ಎಲ್ಲೂ ಒಂದು ರೂಪಾಯಿ ದಂಧೆ ನಡೆದಿಲ್ಲ. ನಾವು ಮಾಡಿಲ್ಲ ಎನ್ನುವ ಧೈರ್ಯ ಇವರಿಗೆ ಇದೆಯೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಎಚ್‌ಡಿ ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿದವರಲ್ಲ. ನಾವು ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ. ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ತಪ್ಪಾಗಿ ಹಣ ಸಂಪಾದನೆ ಮಾಡಿದ್ದರೆ ರಾಜ್ಯ ಸರ್ಕಾರ ತನಿಖೆ ಮಾಡಿ ಅದನ್ನು ವಶಪಡಿಸಿಕೊಳ್ಳಲಿ ಎಂದು ತಿಳಿಸಿದರು.












Click it and Unblock the Notifications