Cauvery: ದೇವೇಗೌಡರು ಮಾತಾಡುವಾಗ ಖರ್ಗೆ ಅವರು ಏಕೆ ಮಾತಾಡಲಿಲ್ಲ?
ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಕಾಂಗ್ರೆಸ್ & ಜೆಡಿಎಸ್ ಮಧ್ಯೆ ತೀವ್ರ ತಿಕ್ಕಾಟ ಶುರುವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆಯೊಂದನ್ನ ಕೇಳಿದ್ದು, ಹಾಗೆ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತಾಡಿದ್ದು ಎಲ್ಲ ಗಮನಿಸಿದ್ದೀರ. ಆದರೆ ಆಗ ನಮ್ಮ ರಾಜ್ಯದವರೇ ಆದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಲ್ಲಿ ಹೋಗಿದ್ದರು? ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ಹೋರಾಟ ನಡೆಸಿದ್ದಾರೆ. ಇವರಿಗೆ ಏನಾಗಿದೆ? ತಮಿಳುನಾಡಿನವರು ಈ ವಿಚಾರ ಪ್ರಸ್ತಾಪ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆ ಅವರು ಯಾಕೆ ಮಾತಾಡ್ಲಿಲ್ಲ? ಎಂದು ಕುಮಾರಸ್ವಾಮಿ ಇದೀಗ ಮಲ್ಲಿಕಾರ್ಜುನ ಖರ್ಗೆ ಅವೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ್ರು ರಾಜ್ಯದ ಜಲ ಸಂಕಷ್ಟವನ್ನು ಸದನದ ಮುಂದಿಟ್ಟರು. ಅವರು ಭಾಷಣ ಮಾತನಾಡುತ್ತಿದ್ರೆ ತಮಿಳುನಾಡಿನ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರು. ಅವರನ್ನು ಎದುರಿಸಲು ಕೂತು ಮಾತನಾಡುತ್ತಿದ್ದ ದೇವೇಗೌಡರು ಎದ್ದು ನಿಂತರು. ಹೀಗಾಗಿ ಕೊನೇ ಪಕ್ಷ ತಮಿಳುನಾಡಿಗೆ ಕಾವೇರಿ ನದಿಯ ನೀರು ಹರಿಸುವ ಮೊದಲು ಆ ದೃಶ್ಯವನ್ನಾದರೂ ಕಣ್ಮುಂದೆ ತಂದುಕೊಳ್ಳಬಹುದಿತ್ತು ಅಲ್ವಾ? ಎಂದು ರಾಜ್ಯ ಸರ್ಕಾರಕ್ಕೆ ಎಚ್‌ಡಿಕೆ ಪ್ರಶ್ನಿಸಿದ್ದಾರೆ.
ದೇವೇಗೌಡರ ಬಗ್ಗೆ ಅಪಪ್ರಚಾರಕ್ಕೆ ಎಚ್‌ಡಿಕೆ ಕಿಡಿ
ದೇವೇಗೌಡರು ದಿಲ್ಲಿಯಲ್ಲಿ ಕಾವೇರಿ ಬಗ್ಗೆ ಮಾತನಾಡುತ್ತಿದ್ರೆ, ಕೆಲವರು ಮೈತ್ರಿಯ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ದೇವೇಗೌಡರು ಹೋಗಿರುವುದು ಕಾವೇರಿ ಬಗ್ಗೆ ಮಾತಾಡಲು ಅಲ್ಲ ಅಂತಾ ಮಂಡ್ಯದ ಮಹಾ ನಾಯಕರು ಒಬ್ಬರು ಹೇಳಿದ್ದಾರೆ. ಇವರೆಲ್ಲಾ ನಿನ್ನೆ ಮೊನ್ನೆ ಬಂದವರು. ಮಾಜಿ ಪ್ರಧಾನಿ ದೇವೇಗೌಡರ ಕಮಿಟ್‌ಮೆಂಟ್ ಬಗ್ಗೆ ಇವರಿಗೆ ಏನು ಗೊತ್ತು? ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಪ್ರತಿನಿತ್ಯವು ಈ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯುತ್ತಿದೆ. ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಏಕಾಂಗಿ ಹೋರಾಟ ಮಾಡಬೇಕಾಗಿ ಬಂದಿದೆ. ಅವರಿಗೆ ಬೆಂಬಲವನ್ನ ಕೊಡಲು ಯಾರೂ ಗತಿಯಿಲ್ಲ ಅಲ್ಲಿ. ನಿಮ್ಮವರೂ ಇದಾರಲ್ಲಾ ರಾಜ್ಯಸಭೆಯಲ್ಲಿ, ಅವರೆಲ್ಲಾ ಯಾಕೆ ಮಾತಾಡ್ತಾ ಇಲ್ಲ? ಎಂದು ಈ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ಎಸ್.ಎಲ್.ಭೈರಪ್ಪ ಸಲಹೆಗೆ ಎಚ್‌ಡಿಕೆ ಸಹಮತ
ಹಾಗೇ ಕನ್ನಡದ ದಿನಪತ್ರಿಕೆ ಒಂದರಲ್ಲಿ ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಹೇಳಿಕೆ ಆದರಿಸಿ ಬರೆದಿರುವ ಲೇಖನವನ್ನ ಪ್ರಸ್ತಾಪ ಮಾಡಿದ್ದಾರೆ ಮಾಜಿ ಸಿಎಂ ಎಚ್‌ಡಿಕೆ. ಯುರೋಪಿನ ಎಂಟು ದೇಶಗಳಲ್ಲಿ ಹರಿಯುವ ಡ್ಯಾನುಬ್ ನದಿ & ಅದರ ನೀರು ಹಂಚಿಕೆ ಬಗ್ಗೆ ನೀಡಿದ್ದ ಹೇಳಿಕೆಯನ್ನ ಪ್ರಸ್ತಾಪ ಮಾಡಿದರು ಮಾಜಿ ಸಿಎಂ.

ಮಾತುಕತೆ ಮೂಲಕ ಬಗೆಹರಿಸಬೇಕು
ಎಸ್.ಎಲ್.ಭೈರಪ್ಪ ಅವರ ಹೇಳಿಕೆ ಅರ್ಥಪೂರ್ಣವಾಗಿದೆ. ಅದಕ್ಕೆ ನನ್ನ ಸಹಮತವು ಇದೆ. ಯುರೋಪಿನ ಎಂಟು ದೇಶಗಳ ನಡುವೆ ಇರುವ ವಿವಾದ ಇದು. ಆ ನದಿಯ ಬಗ್ಗೆ ಬಂದಿರುವ ಕೆಲ ವರದಿಗಳು, ವಿಶ್ಲೇಷಣೆಗಳ ಬಗ್ಗೆ ನಾನು ಓದುತ್ತಿದ್ದೇನೆ. ಕೋರ್ಟ್‌ಗಳಲ್ಲಿ ಆ ನದಿಯ ನೀರು ಹಂಚಿಕೆ ವಿವಾದ ಬಗೆಹರಿಸಲು ಸಾದ್ಯವಿಲ್ಲ. ನೀವೇ ಪರಸ್ಪರ ಕುಳಿತು ಪರಿಹರಿಸಿಕೊಳ್ಳಿ ಅಂತ ಅಂತಾರಾಷ್ಟ್ರೀಯ ಕೋರ್ಟ್ ಹೇಳಿದೆ ಎಂಬುದನ್ನು ಅನೇಕ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ನಾವು ಅರಿತುಕೊಳ್ಳಬೇಕು ಎಂದು ಮಾಜಿ ಸಿಎಂ ಸಲಹೆ ನೀಡಿದ್ದಾರೆ.
ದೇವೇಗೌಡರು ಪ್ರಧಾನಿ ಆಗಿದ್ದಾಗಲೇ ಭಾರತ & ಬಾಂಗ್ಲಾದೇಶದ ನಡುವಿನ ಗಂಗಾ ನದಿ ನೀರಿನ ವಿವಾದ ಬಗೆಹರಿಸಿದರು. ಗುಜರಾತ್ & ಮಧ್ಯಪ್ರದೇಶಕ್ಕೆ ದೊಡ್ಡ ಸಮಸ್ಯೆ ಆಗಿದ್ದ ನರ್ಮದಾ ನದಿ ಬಿಕ್ಕಟ್ಟನ್ನ ಸುಲಭವಾಗಿ ಬಗೆಹರಿಸಿದರು. ಹೀಗೆ ಕಾವೇರಿ ಬಿಕ್ಕಟ್ಟನ್ನ ಪರಿಹರಿಸಲು ಸಾಧ್ಯ ಇಲ್ಲವೇ? ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಸಂಯೋಜಿತ ಡ್ಯಾಂ ನಿರ್ವಹಣಾ ವ್ಯವಸ್ಥೆ ಬೇಕು
ಅಂತಾರಾಜ್ಯ ಜಲ ವಿವಾದಗಳು ಪದೆ ಪದೇ ಕಗ್ಗಂಟು ಆಗುವುದನ್ನು ತಪ್ಪಿಸಲು ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ (integrated reservoir management system) ಅಗತ್ಯ. ಕೆಲ ಕಡೆ ಈ ವ್ಯವಸ್ಥೆಯನ್ನ ಯಶಸ್ವಿಯಾಗಿ ಅಳವಡಿಸಿಕೊಂಡು ಮಾದರಿ ರೀತಿಯಲ್ಲಿ ನೀರು ಹಂಚಿಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ & ಪ್ರಧಾನಮಂತ್ರಿಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಸಲಹೆ ನೀಡಿದರು.
ಜೊತೆಗೆ ಯುಎಸ್ ಬಿಆರ್ (United States Bureau of Reclamation-USBR) ಎಂಬ ಅಮೆರಿಕ ಸಂಸ್ಥೆಯ ನಿರ್ದೇಶನದಂತೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಜಗತ್ತಿನ ಅನೇಕ ದೇಶಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ನೀರಿನ ಸದ್ಬಳಕೆ, ಹಂಚಿಕೆ ಬಗ್ಗೆ ಆ ಸಂಸ್ಥೆಯ ಮಾರ್ಗಸೂಚಿಯನ್ನು ನಾವೂ ಅಳವಡಿಸಿಕೊಳ್ಳಬಹುದೆ ಎನ್ನುವ ಬಗ್ಗೆಯೂ ಕೇಂದ್ರ ಸರ್ಕಾರ ಆಲೋಚನೆ ಮಾಡಬೇಕು ಅಥವಾ ಆ ಸಂಸ್ಥೆಯ ನೆರವು ಪಡೆದು ಕಾವೇರಿ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.












Click it and Unblock the Notifications