HDK And CPY : ಬದ್ದವೈರಿಗಳು ಈಗ ಒಂದಾಗಲೇ ಬೇಕಿರುವ ಅನಿವಾರ್ಯತೆ ಏನು? ಇಲ್ಲಿದೆ ಇನ್ಸೈಡ್ ಸ್ಟೋರಿ
ಬೆಂಗಳೂರು, ಅಕ್ಟೋಬರ್ 03: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ಬದ್ದವೈರಿಗಳಾಗಿದ್ದು, 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಈ ಇಬ್ಬರು ನಾಯಕರು ಒಂದಾಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಪಡೆಯುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ ನಾಯಕರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನ ಗೆಲ್ಲುವ ಪ್ಲಾನ್ ಹಾಕಿಕೊಂಡಿದೆ.ಇತ್ತ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.

ಇನ್ನೂ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒಂದಾಗಲು ಪ್ರಮುಖ ಕಾರಣ ಅಂದ್ರೆ ಅದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನ ಈ ಬಾರೀ ಗೆಲ್ಲಲೇ ಬೇಕು ಎಂದು ಈ ಇಬ್ಬರು ನಾಯಕರು ಪಣತೊಟ್ಟಿದ್ದಾರೆ ಎನ್ನಲಾಗಿದೆ. ಮೈತ್ರಿ ಮಾಡಿಕೊಳ್ಳುವುದಕ್ಕೂ ಮುನ್ನವೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಉತ್ತಮ ಸಂಬಂಧವನ್ನ ಹೊಂದಿದ್ದು, ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.
ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಕೈಯಲ್ಲಿದ್ದು, ಈ ಕ್ಷೇತ್ರವನ್ನ ಗೆಲ್ಲುವ ಮೂಲಕ ಡಿ ಕೆ ಸಹೋದರರಿಗೆ ಪಾಠ ಕಲಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಅವರ ಜೊತೆಗೆ ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತರವನ್ನ ಕುಮಾರಸ್ವಾಮಿ ಅವರು ಕೇಳಿದ್ದಾರೆ ಎನ್ನಲಾಗಿದೆ.

ಇನ್ನೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲು ತೆರೆಮರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ಸಹ ಸಿ ಪಿ ಯೋಗೇಶ್ವರ್ ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರವನ್ನ ಜೆಡಿಎಸ್ ನಾಯಕರು ಕೇಳಿದ್ದರೂ ಸಹ ಈ ಕ್ಷೇತ್ರದಲ್ಲಿ ಸಿ ಪಿ ಯೋಗೇಶ್ವರ್ ಗೆ ಸಿಗುವ ಸಾಧ್ಯತೆ ಇದೆ.
ಇತ್ತ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳಾಗಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಲೋಕಸಭಾ ಚುನಾವಣೆ ಹಿನ್ನಲೆ ಒಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ದಳಪತಿಗಳ ವರ್ಚಸ್ಸು ಹೆಚ್ಚಾಗಿದ್ದು, ಕುಮಾರಸ್ವಾಮಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ಸಿ ಪಿ ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಮೈತ್ರಿಯಿಂದ ನಮಗೆ ಲಾಭವಾಗಲಿದೆ. ಜೆಡಿಎಸ್ ನಾಯಕರ ಜತೆಗೆ ಇನ್ನೊಂದು ಸಭೆ ನಡೆಸಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ನಾವೆಲ್ಲಾ ಒಟ್ಟಾಗಿ ಸಭೆ ನಡೆಸುತ್ತೇವೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಇನ್ನೂ ಮೈತ್ರಿಯಿಂದ ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸಹಾಯಕವಾಗುತ್ತದೆ. ಅಲ್ಲದೇ ಮುಂದಿನ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ನಾವು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಜೆಪಿ ಹೈಕಮಾಂಡ್ ನಾಯಕ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿರುವ ಕುಮಾರಸ್ವಾಮಿ ಅವರನ್ನ ಈಗಾಗಲೇ ಹಲವು ರಾಜ್ಯ ಬಿಜೆಪಿ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನೂ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಅವರು ಸಹ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ರಾಜಕೀಯ ಜೀವನದ ಬಗ್ಗೆಯೂ ಕುಮಾರಸ್ವಾಮಿ ಜೊತೆಗೆ ರಮೇಶ್ ಜಾರಕಿಹೊಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಡಿ ಕೆ ಸಹೋದರರನ್ನ ಸೋಲಿಸಲು ಚರ್ಚೆ ನಡೆಸಿದ್ದು, ಸಿ ಪಿ ಯೋಗೇಶ್ವರ್ ಅವರನ್ನ ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಒಟ್ನಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಡಿ ಕೆ ಸುರೇಶ್ ಅವರನ್ನ ಈ ಬಾರಿಯ ಲೋಕಸಮರದಲ್ಲಿ ಸೋಲಿಸಬೇಕು ಎಂದು ಕುಮಾರಸ್ವಾಮಿ ಹಾಗೂ ಸಿ ಪಿ ಯೋಗೇಶ್ವರ್ ಪಣತೊಟ್ಟಿದ್ದು, ಒಂದಾಗಿ ಚುನಾವಣೆ ಎದುರಿಸಲು ಹಲವು ತಂತ್ರಗಾರಿಕೆಯನ್ನ ರೂಪಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications