BJP-JDS ಮಹಾಮೈತ್ರಿ ಮುನ್ಸೂಚನೆ?: ಕುಮಾರಸ್ವಾಮಿ, ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಬೆಂಗಳೂರು,ಜುಲೈ 21: 2024 ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಲಿದೆ ಎನ್ನುವ ಚರ್ಚೆಗಳು ಜೋರಾಗಿದ್ದು, ಇದೀಗ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿ, ಮೈತ್ರಿಯ ಮಹಾ ಸುಳಿವಿಗೆ ಪುಷ್ಠಿ ನೀಡಿದೆ.
ಹೌದು, ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ದ ಹಲವು ದಾಖಲೆಗಳ ಮೂಲಕ ಕಿಡಿಕಾರಿದ್ದಾರೆ. ಕಳೆದ ಮೂರು ದಿನಗಳ ಸದನದ ಕಲಾಪ ಗಮನಿಸಿದ್ದೇವೆ. ಸದನದ ಕಲಾಪದ ಮೌಲ್ಯ ಕುಸಿಯುತ್ತಿದೆ. ಎರಡು ನಿಮಿಷದಲ್ಲಿ ಮುಗಿಯುವ ಘಟನೆಯನ್ನು ಇಷ್ಟು ದೊಡ್ಡದಾಗಿ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳ ದುರ್ಬಳಕೆ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸದಸ್ಯರನ್ನು ಊಟಕ್ಕೂ ಬಿಡದೆ, ಬುದ್ದಿ ಕಲಿಸುತ್ತೇನೆ ಎಂದು ಶಾಲಾ ಮಕ್ಕಳ ರೀತಿ ಹೀಗೆ ನಡೆಸಿಕೊಂಡಿದ್ದು ಸರಿಯಾದ ಕ್ರಮ ಅಲ್ಲ. ಈ ಹಿಂದೆಯೂ ಕಾಗದ ಹರಿದ ಘಟನೆ ನಡೆದಿತ್ತು. ವಿಧಾನಪರಿಷತ್ ನಲ್ಲೂ ಉಪ ಸಭಾಪತಿ ಗಳನ್ನು ಎಳೆದು ಹಾಕಲಾಕಲಾಗಿತ್ತು.
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ನಾವು ಏಕೆ ಹೊಟ್ಟೆ ಉರಿ ಪಡಬೇಕು. ರೈತರಿಗೆ ಕೃಷಿ ಚಟುವಟಿಕೆಗೆ ಹತ್ತು ಸಾವಿರ ಕೊಡುವ ಯೋಜನೆ ಇತ್ತು, ಆದರೆ ಅದನ್ನು ತೆಗೆದು ಹಾಕಲಾಗಿದೆ. ಅನ್ನದಾತನನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ. ಮಳೆ ಇಲ್ಲ, ಬರಗಾಲದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇನ್ನೂ ಜುಲೈವರೆಗೆ ಕಾದು ನೋಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಜೆಟ್ ಬಗ್ಗೆ ಮಾತನಾಡಲು ನಾವು ಬೊಮ್ಮಾಯಿ ಅವರು ಸಿದ್ದರಿದ್ವಿ. ಅನ್ನಭಾಗ್ಯ, ಗೃಹಲಕ್ಷಿ ಗೃಹ ಜ್ಯೋತಿ ಕೊಟ್ಟಿದ್ದಿರಿ, ಅನ್ನದಾತರಿಗೆ ಎನ್ ಕೊಟ್ರಿ ಎಂದು ಪ್ರಶ್ನಿಸಿದ ಅವರು, ಕೇಂದ್ರದಿಂದ ರೈತರಿಗೆ 6 ಸಾವಿರ ಕೊಡುತ್ತಿದ್ರು. ರಾಜ್ಯದಿಂದ 4 ಸಾವಿರ ಕೊಡ್ತಿದ್ರು ಅದನ್ನ ಕಿತ್ತು ಹಾಕಿದ್ದಿರಾ. ಅನ್ನದಾನರನ್ನು ಬೀದಿಗೆ ತಂದು ನಿಲ್ಲಿಸಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ನಿಮ್ಮನ್ನು ರೌಡಿ ಗುರು ಎಂದು ಕರೆಯಬೇಕಾ!
ನಾವೂ ಬಜೆಟ್ ಮೇಲೆ ಮಾತನಾಡಲು ಸಿದ್ಧರಿದ್ದೆವು. ಆದರೆ ಹೊಸ ಶಾಸಕರಿಗೆ ಎರಡು ನಿಮಿಷ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ನಾವು ಮಾಡಿದರೆ ದಲಿತ ಉಪಾಧ್ಯಕ್ಷರಿಗೆ ಮಾಡಿದ ಅವಮಾನ ಎನ್ನುತ್ತೀರಿ, ಸದನದಲ್ಲಿ ಶಿವಲಿಂಗೇಗೌಡರು ಉಪಾಧ್ಯಕ್ಷರನ್ನು ಯಾವ ರೀತಿ ನಡೆಸಿಕೊಂಡರು. ಮೋದಿಯನ್ನು ವಿಶ್ವ ಗುರು ಎಂದು ಹೇಳುತ್ತೀರಿ, ನಿಮ್ಮನ್ನು ರೌಡಿ ಗುರು ಎಂದು ಕರೆಯಬೇಕಾ ಹಾಗಾದರೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ನಾವು ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ. ಸದನದ ಒಳಗೆ ಹಾಗೂ ಹೊರಗೆ ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇವೆ, ಇದೆಲ್ಲವೂ ರಾಜ್ಯದ ಜನರ ಹಿತದೃಷ್ಟಿಯಿಂದಾಗಿ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಿಯಂತ್ರಿಸಲು ಹೊರಟಿದ್ದಾರೆ. ಟಿ.ಬಿ. ಜಯಚಂದ್ರ ಅವರೇ ಮಾತನಾಡಿದ್ದು ಸದನ ಸಮೀತಿ ರಚಿಸಿ ಮೌನವಾಗುವ ಸರ್ಕಾರದ ನಿರ್ಧಾರ ನಾಟಕೀಯ ಅನ್ನಿಸುತ್ತಿದೆ ಅಂತ ನೈಸ್ ವಿಚಾರ ಪ್ರಸ್ತಾಪಿಸಿದ್ದರು. ನನ್ನ ಸರ್ಕಾರ ಅವಧಿಯಲ್ಲಿ ಮಾಡಬಹುದಿತ್ತು ಅಂತ ನೀವು ಹೇಳಬಹುದು. ಆಗಿಲ್ಲ, ಕಟ್ಟಿಹಾಕಿದ್ದರು.
ನಾನು ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಮಾಧುಸ್ವಾಮಿ ಮೇಲೆ 5 ಲಕ್ಷ ದಂಡ ಹಾಕಿದರು. ದೇವೇಗೌಡರ ಮೇಲೆ 2 ಕೋಟಿ ದಂಡ ಹಾಕಿದ್ದರು. ಈ ಸಂದರ್ಭ ಬೊಮ್ಮಾಯಿ ಸರ್ಕಾರ ಈ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಮಾಡಿದ್ದು, ಕೋರ್ಟ್ ಈಗ ಆ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡಿಸುತ್ತಿದ್ದಾನೆ ಎಂದು ಅಶೋಕ್ ಖೇಣಿ ವಿರುದ್ಧ ಏಕವಚನದಲ್ಲಿ ಆರೋಪಿಸಿದರು.
ನಾವು ನೈಸ್ ಹಲವು ಅಕ್ರಮದ ವಿರುದ್ಧ ಒಂದಿಷ್ಟು ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದೆವು. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಭೂಮಿ ಕಬಳಿಸುವ ಇಂತಹ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ ಎಂದರು.












Click it and Unblock the Notifications