ಜೆಡಿಎಸ್‌ಗೆ ಹೊಸ ಅಧ್ಯಕ್ಷರ ನೇಮಕ : ಪಣ ತೊಟ್ಟಂತೆ ಮಾಡಿದ ದೇವೇಗೌಡ!
ಬೆಂಗಳೂರು, ಜುಲೈ 04 : ಕರ್ನಾಟಕ ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಚ್.ಕೆ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಎಚ್.ಡಿ.ದೇವೇಗೌಡರು ಹೇಳಿದಂತೆ ಮಾಡಿ ತೋರಿಸಿದ್ದಾರೆ.
ಗುರುವಾರ ಜೆ.ಪಿ.ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಎಚ್.ವಿಶ್ವನಾಥ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.
ಜೆಡಿಎಸ್ ರಾಧ್ಯಾಕ್ಷರಾಗಿ ದೇವೇಗೌಡ ಆಪ್ತ ಎಚ್.ಕೆ.ಕುಮಾರಸ್ವಾಮಿ ನೇಮಕ
'ತುಮಕೂರಿನಲ್ಲಿ ನಾನು ಸೋತೆ. ಅದರ ನೈತಿಕ ಹೊಣೆ ಹೊತ್ತು ವಿಶ್ವನಾಥ್ ರಾಜೀನಾಮೆ ಕೊಟ್ಟರು. ಹಾಗಾಗಿ ಆ ಸ್ಥಾನಕ್ಕೆ ಎಚ್.ಕೆ.ಕುಮಾರಸ್ವಾಮಿ ಅವರನ್ನು ನೇಮಿಸುತ್ತಿದ್ದೇವೆ' ಎಂದು ಎಚ್.ಡಿ.ದೇವೇಗೌಡರು ಹೇಳಿದರು.
ಮಾಧ್ಯಮಗಳಿಗೆ ಸರ್ಕಾರ ಬೀಳುವುದು ನೋಡುವ ಆಸೆ: ದೇವೇಗೌಡ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದೆ. ಈ ಮೂಲಕ ಪಕ್ಷ ಸಂಘಟನೆ ಮಾಡುವ ಹೊಣೆಯನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.
ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎಚ್.ಡಿ.ದೇವೇಗೌಡ

ಹೊಸ ಅಧ್ಯಕ್ಷರ ನೇಮಕ
ಎಚ್.ಕೆ.ಕುಮಾರಸ್ವಾಮಿ ಅವರ ಹೆಸರು ಘೋಷಣೆ ಮಾಡಿದ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, '5 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಒಂದು ಸರಿ ಸಚಿವರಾಗಿ ಕೆಲಸ ಮಾಡಿದ
ಎಚ್.ಕೆ. ಕುಮಾರಸ್ವಾಮಿ ಅವರನ್ನು ಎಚ್.ವಿಶ್ವನಾಥ್ ಅವರ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ' ಎಂದು ಹೇಳಿದರು.

ಪಣ ತೊಟ್ಟಂತೆ ಮಾಡಿದ ಗೌಡರು
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಎಚ್.ಡಿ.ದೇವೇಗೌಡರು, 'ಎಚ್.ವಿಶ್ವನಾಥ್ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ. ಬದಲಿಗೆ ಅವರಿಂದಲೇ ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿಸುತ್ತೇನೆ' ಎಂದು ಹೇಳಿದ್ದರು.

ಇಂದು ಅಧಿಕಾರ ಹಸ್ತಾಂತರ
ಗುರುವಾರ ಎಚ್.ವಿಶ್ವನಾಥ್ ಅವರ ಸಮ್ಮುಖದಲ್ಲಿಯೇ ಎಚ್.ಡಿ.ದೇವೇಗೌಡರು ಎಚ್.ಕೆ.ಕುಮಾರಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿಸಿದ್ದಾರೆ. ಎಚ್.ವಿಶ್ವನಾಥ್ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡದೇ ತಾವು ಹೇಳಿದಂತೆಯೇ ದೇವೇಗೌಡರು ಮಾಡಿದ್ದಾರೆ.

ಹೊಸ ಪದಾಧಿಕಾರಿಗಳು
ಗುರುವಾರ ಎಚ್.ಡಿ.ದೇವೇಗೌಡರು ಎಚ್.ಕೆ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಮಧು ಬಂಗಾರಪ್ಪ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಉಳಿದಂತೆ ನೇಮಕಗೊಂಡವರು.
* ಎನ್.ಎಂ.ನಬಿ : ಹಿರಿಯ ಉಪಾಧ್ಯಕ್ಷರು
* ಕೆ.ಗೋಪಾಲಯ್ಯ : ಹಿರಿಯ ಉಪಾಧ್ಯಕ್ಷರು
* ಆರ್.ಮಂಜುನಾಥ್ : ಉಪಾಧ್ಯಕ್ಷರು
* ನಿಖಿಲ್ ಕುಮಾರಸ್ವಾಮಿ : ಅಧ್ಯಕ್ಷರು (ಯುವ ಜನತಾದಳ)
* ಎನ್.ಎಂ. ನೂರ್ ಅಹ್ಮದ್ : ಕಾರ್ಯಾಧ್ಯಕ್ಷರು (ಯುವ ಜನತಾದಳ)
* ಶರಣ್ ಗೌಡ ಕಂದನೂರ್ : ಮಹಾಪ್ರಧಾನ ಕಾರ್ಯರ್ಶಿ (ಯುವ ಜನತಾದಳ)
* ನರಸಿಂಹಮೂರ್ತಿ : ಹಿರಿಯ ಉಪಾಧ್ಯಕ್ಷರು (ಯುವ ಜನತಾದಳ)
* ಸಿ.ಬಿ.ಸುರೇಶ್ ಬಾಬು : ಅಧ್ಯಕ್ಷರು, ರಾಜ್ಯ ಬೂರ್ ಸಮಿತಿ
* ನಾಸೀರ್ ಭಗವಾನ್ : ಅಧ್ಯಕ್ಷರು, ಅಲ್ಪ ಸಂಖ್ಯಾತರ ವಿಭಾಗ