ರಾಜಕಾರಣಿಗಳ ಹೆಸರು ನಾಮಕರಣಕ್ಕೆ ಆಕ್ಷೇಪ: ಸರ್ಕಾರಕ್ಕೆ ನೋಟಿಸ್
ಬೆಂಗಳೂರು, ಮಾರ್ಚ್ 13: ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗುವ ಸರ್ಕಾರಿ ಕಟ್ಟಡ, ಪಾರ್ಕ್, ರಸ್ತೆ ಮತ್ತಿತರ ಸ್ಥಳಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರುಗಳು ನಾಮಕರಣ ಮಾಡುವುದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲಾಧಿಕಾರಿ, ದಾವಣಗೆರೆ ನಗರಸಭೆ, ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ಸಹ ಹೈಕೋರ್ಟ್ ನೋಟಿಸ್ ಜಾರಿಗೆ ಆದೇಶಿಸಿತು.

ದಾವಣಗೆರೆ ನಿವಾಸಿ ವಕೀಲ ಎ. ಸಿ. ರಾಘವೇಂದ್ರ, ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸರ್ಕಾರದ ಅನುದಾನಲ್ಲಿ ಕಟ್ಟಲಾದ ಸರ್ಕಾರಿ ಕಟ್ಟಡಗಳಿಗೆ ಜೀವಂತ ರಾಜಕಾರಣಿಗಳ ಹೆಸರು ಇಡಬಾರದು ಎಂದು 2012ರಲ್ಲಿ ಇದೇ ಹೈಕೋರ್ಟ್ ಆದೇಶವೊಂದನ್ನು ನೀಡಿದೆ.
ಈ ರೀತಿ ಹೈಕೋರ್ಟ್ 2012ರಲ್ಲಿ ನೀಡಿದ ಆದೇಶ ಆಧರಿಸಿ ಹಾಗೂ ಅರ್ಜಿದಾರರು 2023ರ ಜುಲೈ 25ರಂದು ಸಲ್ಲಿಸಿರುವ ಮನವಿಯಂತೆ ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಇನ್ನೂ ಜೀವಂತವಾಗಿರುವ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ ಅವರ ಹೆಸರು ಇಟ್ಟಿರುವುದನ್ನು ತೆರವುಗೊಳಿಸಲು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಅದೇ ರೀತಿ ದಾವಣಗೆರೆಯಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಲಾದ ಅನೇಕ ಕಟ್ಟಡಗಳು, ಪಾರ್ಕ್, ಬಸ್ ನಿಲ್ದಾಣ, ರಸ್ತೆಗಳಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ ಅವರ ಹೆಸರಗಳನ್ನು ಇಡಲಾಗಿದೆ. ಇದನ್ನು ತೆರವುಗೊಳಿಸುವಂತೆ ಕೋರಿ ಎಂದು ನ್ಯಾಯಾಲಯದ ಗಮನ ಸೆಳೆದರು.
ಅರ್ಜಿಯ ವಿವರಗಳು: ದಾವಣಗೆರೆ ನಗರಸಭೆಯು ಸಾರ್ವಜನಿಕರ ಹಣದಿಂದ ಹಳೆ ಪುಣೆ-ಬೆಂಗಳೂರು ರಸ್ತೆಯಲ್ಲಿ ಕಟ್ಟಿರುವ ಬಸ್ ನಿಲ್ದಾಣಕ್ಕೆ 'ಶಾಮನೂರು ಶಿವಶಂಕರಪ್ಪ ಬಸ್ ಸ್ಟ್ಯಾಂಡ್' ಎಂದು ಹೆಸರಿಡಲಾಗಿದೆ.
ಕುಂದವಾಡ ಗ್ರಾಮದಲ್ಲಿರುವ ಕುಂದವಾಡ ಕೆರೆ ಸಹ ದಾವಣಗೆರೆ ನಗರಸಭೆ ನಿರ್ಮಾಣ ಮಾಡಿ, ನಿರ್ವಹಣೆ ಮಾಡುತ್ತಿದೆ. ದಾವಣಗೆರೆ ನಗರದ ಕುಡಿಯುವ ನೀರಿಗಾಗಿ ಬಳಸಲಾಗಿರುವ ಈ ಕೆರೆಯ ಹೆಸರನ್ನು 'ಎಸ್. ಎಸ್. ಮಲ್ಲಿಕಾರ್ಜುನ ಸಾಗರ' ಎಂದು ಇಡಲಾಗಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಎಸ್. ಎಸ್. ಮಲ್ಲಿಕಾರ್ಜುನ ಸಭಾಂಗಣ ಎಂದು ಹೆಸರಿಡಲಾಗಿದೆ. ನಗರಸಭೆಯ ಸಭಾಂಗಣಕ್ಕೆ'ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣ' ಎಂದು ನಾಮಕರಣ ಮಾಡಲಾಗಿದೆ.
ನಗರದಲ್ಲಿರುವ ಪಾರ್ಕ್‌ಗೆ 'ಡಾ. ಶಾಮನೂರು ಶಿವಶಂಕರಪ್ಪ ಉದ್ಯಾನವನ' ಎಂದು ಹೆಸರಿಡಲಾಗಿದೆ. ಹುಡ್ಕೋ ಬಡಾವಣೆಗೆ 'ಎಸ್‌ಎಸ್‌ಎಂ ನಗರ' 'ಡಾ. ಶಾಮನೂರು ಶಿವಶಂಕರಪ್ಪ ನಗರ' ಎಂದು ಹೆಸರಿಟ್ಟಿರುವುದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.












Click it and Unblock the Notifications