
ಆಧಾರ್ ಮಾಹಿತಿ ಸೋರಿಕೆ ಆರೋಪದ ಪಿಐಎಲ್ ಪುರಸ್ಕಾರಕ್ಕೆ ಹೈಕೋರ್ಟ್ ನಕಾರ
ಬೆಂಗಳೂರು, ಅ. 21: ಆಧಾರ್ ಬಯೋಮೆಟ್ರಿಕ್ ಮತ್ತು ಆಧಾರ್ ವ್ಯವಸ್ಥೆಯಿಂದ ಸಂಗ್ರಹಣೆ ಮಾಡಲಾಗಿರುವ ದತ್ತಾಂಶದ ನಿರ್ವಹಣೆ ಗುತ್ತಿಗೆಯನ್ನು ಅಮೆರಿಕ ಸೇರಿದಂತೆ ನಾಲ್ಕು ವಿದೇಶಿ ಕಂಪನಿಗಳಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಲು ನಿರಾಕರಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ನಗರದ ನಿವಾಸಿ ಮ್ಯಾಥ್ಯೂ ಥಾಮಸ್‌ಗೆ ಹೈಕೋರ್ಟ್ ಸಲಹೆ ನೀಡಿದೆ.
ಥಣಿಸಂದ್ರದ ಮ್ಯಾಥ್ಯೂ ಧಾಮಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಆಧಾರ್ ಬಯೋಮೆಟ್ರಿಕ್ ಮತ್ತು ಆಧಾರ್ ಮೂಲಕ ಸಂಗ್ರಹಿಸಿದ ದತ್ತಾಂಶದ ನಿರ್ವಹಣೆ ಕಾರ್ಯದ ಗುತ್ತಿಗೆಯನ್ನು ನಾಲ್ಕು ವಿದೇಶಿ ಕಂಪನಿಗಳಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಅಮೆರಿಕದ ಕಂಪನಿಯು ಅಲ್ಲಿನ ಎಫ್‌ಬಿಐ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಆಧಾರ್ ದತ್ತಾಂಶ ಈ ಎಲ್ಲಾ ಕಂಪನಿಗಳಿಗೆ ಸುಲಭವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು.
Aadhaar Card Update: ನಿಮ್ಮ ಆಧಾರ್ 10 ವರ್ಷ ಹಳೆಯದೇ? ತಕ್ಷಣ ಹೀಗೆ ನವೀಕರಿಸಿ
ಅದಕ್ಕೆ ಉತ್ತರಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಎತ್ತಲಾಗಿರುವ ಅಂಶಗಳ ಕುರಿತು ಸುಪ್ರಿಂಕೋರ್ಟ್ ಮುಂದೆ ಪರಿಹಾರ ಪಡೆಯುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಪ್ರಶಾಂತ್ ಭೂಷಣ್ ಉತ್ತರಿಸಿ, ಆಧಾರ್ ಕಾರ್ಡ್ ಪಡೆಯಲು ಜನ ತಮ್ಮ ಖಾಸಗಿ ಮಾಹಿತಿ ನೀಡಬೇಕಿರುವ ಹಿನ್ನೆಲೆಯಲ್ಲಿ ಆ ಕುರಿತ ಕಾನೂನಾತ್ಮಕ ಅಂಶಗಳ ಬಗ್ಗೆ ಅರ್ಜಿದಾರರು ಈ ಹಿಂದೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರಿಂ ಕೊರ್ಟ್ ಸಹ ಆಧಾರ್ ಕಾರ್ಡ್‌ಗಾಗಿ ಜನ ನೀಡುವುದು ಖಾಸಗಿ ಮಾಹಿತಿಯಾಗಿದ್ದು, ಗೌಪ್ಯತೆಗೆ ಸಂಬಂಧಿಸಿರುವುದಾಗಿ ಹೇಳಿದೆ. ತದ ನಂತರ ಬೆಳವಣಿಗೆಗಳ ಬಗ್ಗೆ ಈ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಹೈಕೋರ್ಟ್ ಹೊಂದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ನ್ಯಾಯಪೀಠ ಪ್ರತಿಕ್ರಿಯಿಸಿ,, ಈ ಹಿಂದೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರಿಂಕೋರ್ಟ್ ಸುದೀರ್ಘವಾದ ಆದೇಶ ಹೊರಡಿಸಿದೆ. ಹಾಗಾಗಿ, ಈ ವಿಚಾರದ ಕುರಿತು ಸುಪ್ರಿಂಕೋರ್ಟ್ ವಿಚಾರಣೆ ನಡೆಸುವುದೇ ಸೂಕ್ತ ಎಂದು ಹೇಳಿತು.ಅದಕ್ಕೆ ಒಪ್ಪಿದ ಅರ್ಜಿದಾರರು, ಅರ್ಜಿ ಹಿಂಪಡೆದು ಸುಪ್ರಿಂಕೋರ್ಟ್ ಮುಂದೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು. ಜೊತೆಗೆ, ಅರ್ಜಿಯಲ್ಲಿ ಎತ್ತಲಾಗಿರುವ ಎಲ್ಲಾ ಅಂಶಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಸ್ಪಷ್ಟಪಡಿಸಿತು.

ಮಾಣಿಪ್ಪಾಡಿ ವರದಿ ಮಂಡನೆ: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಕಬಳಿಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವಿಶೇಷ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ರಾಜ್ಯ ಸಚಿವ ಸಂಪುಟವು 2022ರ ಸೆ.21ರಂದು ತೀರ್ಮಾನಿಸಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.
ಮಾಜಿ ಸಚಿವ ಎಸ್.ಕೆ. ಕಾಂತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರಿ ವಕೀಲರು ಈ ಮಾಹಿತಿ ನೀಡಿದರು.
ವಿಶೇಷ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಕೈಗೊಂಡ ಕ್ರಮಗಳೇನು ಹಾಗೂ ವರದಿಯನ್ನು ಯಾವಾಗ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೆ.28ರಂದು ಹೈಕೋರ್ಟ್ ನಿರ್ದೇಶಿಸಿತ್ತು.
ಸರ್ಕಾರಿ ವಕೀಲರು ಹಾಜರಾಗಿ, ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವಿಶೇಷ ವರದಿಯನ್ನು ರಾಜ್ಯ ಉಭಯ ಸದನದಲ್ಲಿ ಮಂಡಿಸಲು 2022ರ ಸೆ.21ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಭಯ ಸದನದಲ್ಲಿ ಮಂಡಿಸಿದ ನಂತರ ವಿಶೇಷ ವರದಿ ಮೇಲೆ ಮಂದಿನ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸರ್ಕಾರ ತೀರ್ಮಾನ ಕೈಗೊಂಡ ನಂತರ ಆ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.
ಸಿಬಿಐಗೆ ವಹಿಸಲು ಮನವಿ: ಅಲ್ಪಸಂಖ್ಯಾತರ ಆಯೋಗವು 2012ರಲ್ಲಿ ಸಲ್ಲಿಸಿರುವ ವಿಶೇಷ ವರದಿಯಲ್ಲಿ ಮಾಡಲಾದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗೆ ನಿರ್ದೇಶನ ನೀಡಬೇಕು. ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.