ಕ್ಯಾನ್ಸರ್ ರೋಗಿಗಳ ಕುಟುಂಬದ ನೆರವಿಗೆ ಧಾವಿಸಿದ ಹೈಕೋರ್ಟ್
ಬೆಂಗಳೂರು, ಏಪ್ರಿಲ್ 14; ತಮ್ಮದೇ ಆಸ್ತಿ ಇದ್ದರೂ ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮೂವರು ಕ್ಯಾನ್ಸರ್ ರೋಗಿಗಳು ಮತ್ತು ಓರ್ವ ಮಾನಸಿಕ ರೋಗಿಯನ್ನು ಹೊಂದಿರುವ ಕುಟುಂಬವೊಂದರ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ. ಅಲ್ಲದೇ, ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಕ್ಕೆ ಗುರುತಿಸಿರುವ ಕುಟುಂಬದ 3 ಎಕರೆ 3 ಗುಂಟೆ ಜಮೀನು ಪೈಕಿ ಶೇ.50ರಷ್ಟು ಭಾಗವನ್ನು ಮಾರಾಟಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರಿನ ಮತ್ತಿಕೆರೆಯ ವೃದ್ಧೆ ಟಿ. ಜಿ ಶಾಂತಮ್ಮ ಮತ್ತವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅರ್ಜಿ ಮಾನ್ಯ ಮಾಡಿರುವ ಹೈಕೋರ್ಟ್, ಒಂದು ವೇಳೆ ಅರ್ಜಿದಾರರಿಗೆ ಆಸ್ತಿ ಪರಭಾರೆ ಅಥವಾ ವರ್ಗಾವಣೆಗೆ ಅವಕಾಶ ಕಲ್ಪಿಸದಿದ್ದರೆ ಕಾಯಿಲೆಗೆ ಬಲಿಯಾಗುವ ಸಾಧ್ಯತೆಯಿದೆ. ಚಿಕಿತ್ಸೆ ತುರ್ತಾಗಿ ಹಣದ ಅಗತ್ಯವಿದೆ. ಸಂವಿಧಾನದದಲ್ಲಿ ಜೀವಿಸುವ ಹಕ್ಕಿಗೆ ಖಾತರಿಯಿದೆ. ಚಿಕಿತ್ಸೆ ಪಡೆಯುವ ಅವಕಾಶದಿಂದ ಅರ್ಜಿದಾರರನ್ನು ದೂರ ತಳ್ಳಿದರೆ, ಅದು ಅವರ ಸಾಂವಿಧಾನ ಹಕ್ಕಿನ ಉಲ್ಲಂಘನೆಯಾಗಲಿದೆ.

ಹಾಗಾಗಿ, ಸ್ವಾಧೀನಕ್ಕೆ ಗುರುತಿಸಿರುವ ಜಮೀನಿನ ಶೇ. 50ರಷ್ಟು ಭಾಗವನ್ನು ಮಾರಾಟ ಮಾಡಲು ಅನುಮತಿಸಲಾಗಿದೆ ಎಂದು ಆದೇಶಿಸಿದೆ. ಅಲ್ಲದೇ, ಜಮೀನನ್ನು ಖರೀದಿ ಮಾಡುವವರ ಹೆಸರುಗಳು ಜೊತೆಗೆ ಜಮೀನು ಮಾರಾಟ ಮಾಡಿದ ತಕ್ಷಣ ಈ ಸಂಬಂಧ ಮಾಹಿತಿ ಒದಗಿಸಬೇಕು ರಾಜ್ಯ ಸರ್ಕಾರ ಮತ್ತು ಕೆಐಎಡಿಬಿಗೆ ಒದಗಿಸಬೇಕು ಎಂದು ಅರ್ಜಿದಾರರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಕೋರ್ಟ್ ಆದೇಶವೇನು?; ಈ ಪರ್ಯಾಯ ಮನವಿಯನ್ನು ಒಪ್ಪಿದ ಹೈಕೋರ್ಟ್, ಒಬ್ಬ ನಾಗರಿಕ ಜೀವನವು ಕೆಲವು ಆಸ್ತಿಯ ಮೇಲೆ ಅವಲಂಬಿಸಿದೆ. ಜತೆಗೆ, ಸ್ವಾಧೀನಕ್ಕೆ ಗುರುತಿಸಿರುವ ಜಮೀನಿನ ಪರಿಹಾರ ಪಾವತಿಸುವಲ್ಲಿ ವಿಳಂಬವಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಗೆ ನೆರವಾಗಬೇಕಾದ ಅಗತ್ಯವಿದೆ. ಜೀವನೋಪಾಯಕ್ಕಾಗಿ ಉಳಿಸಿಕೊಂಡ ಜಮೀನನ್ನು ಮಾರಣಾಂತಿಕ ಕಾಯಿಲೆ ಇದ್ದಾಗ ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಒಬ್ಬ ವ್ಯಕ್ತಿಯನ್ನು ತಡೆದರೆ ಅದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಆಕ್ಸಿಜನ್ ಮಾಸ್ಕ್ ತೆಗೆದುಹಾಕಿದಂತಾಗುತ್ತದೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರು, ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಪರಿಹಾರದಲ್ಲಿ ಭಾಗಶಃ ಹಣವನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಕೆಐಎಡಿಬಿ ಹೇಳಿದೆ. ಆದರೆ, ಸದ್ಯ ಚಿಕಿತ್ಸೆ ಹಣ ತುರ್ತಾಗಿ ಬೇಕಿದೆ. ಇದರಿಂದ ಪರಿಹಾರ ನೀಡದಿದ್ದರೂ ಸ್ವಾಧೀನಕ್ಕೆ ಗುರುತಿಸಿರುವ ಎರಡು ಎಕರೆ 3 ಗುಂಟೆ ಜಾಗದಲ್ಲಿ ಶೇ.50ರಷ್ಟುನ್ನು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು.

ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ಹಲವು ತಿಂಗಳು ಕಳೆದರೂ ಈವರೆಗೂ ಉದ್ದೇಶಿತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮತ್ತು ಆರ್ಥಿಕ ಸಂಕಷ್ಟದಿಂದ ಸುಧಾರಣೆಯಾಗಲು ಅನುಕೂಲವಾಗುವಂತೆ ಸ್ವಾಧೀನಕ್ಕೆ ಗುರುತಿಸಿರುವ ಜಮೀನಿಗೆ ನೀಡಲು ಉದ್ದೇಶಿಸಿರುವ ಪರಿಹಾರದಲ್ಲಿ ಶೇ.50ರಷ್ಟು ಮೊತ್ತ (1.63 ಕೋಟಿ ರು) ಬಿಡುಗಡೆ ಮಾಡಲು ಕೆಐಎಡಿಬಿ ನಿರ್ದೇಶಿಸಬೇಕು. ಇಲ್ಲವೇ ಜಮೀನನಲ್ಲಿ ಶೇ.50ರಷ್ಟು ಪರಭಾರೆ ಹಾಗೂ ವರ್ಗಾವಣೆ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರರು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಶಾಂತಮ್ಮ ಮತ್ತು ಅವರ ಇಬ್ಬರು ಪುತ್ರರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮತ್ತೊಬ್ಬ ಪುತ್ರ ಮಾನಸಿಕ ರೋಗಿಯಾಗಿದ್ದಾರೆ. ಅವರ ಮಗಳು ಹಾಗೂ ಅಳಿಯ ಈ ಎಲ್ಲರನ್ನು ಆರೈಕೆ ಮಾಡುತ್ತಿದ್ದಾರೆ. ಆದರೆ, ಚಿಕಿತ್ಸೆ ಒದಗಿಸುವುದಕ್ಕೆ ಹಣವಿಲ್ಲ. ಬೇರೊಂದು ಆದಾಯ ಮೂಲವೂ ಇಲ್ಲ. ಮತ್ತೊಂದೆಡೆ ಚಿಕಿತ್ಸೆ ಕಲ್ಪಿಸುವುದಕ್ಕಾಗಿ ಈಗಾಗಲೇ ಪಡೆದಿರುವ 50 ಲಕ್ಷ ರೂ. ಸಾಲವನ್ನು ಹಿಂದುಗಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಇದರಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ತಮಗೆ ಸೇರಿರುವ 3 ಎಕರೆ 3 ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಸ್ವಾಧೀನಕ್ಕೆ ಉದ್ದೇಶಿಸಿರುವ ಜಾಗಕ್ಕೆ ನಿಗದಿಪಡಿಸಿರುವ ಪರಿಹಾರ ಮೊತ್ತದಲ್ಲಿ ಶೇ.50ರಷ್ಟು ಪಾವತಿಸಬೇಕು ಎಂದು ಕೆಐಎಡಿಬಿಗೆ ಅರ್ಜಿದಾರರು ಕೋರಿರು. ಆ ಮನವಿಗೆ ಕೆಐಎಡಿಬಿ ಸ್ಪಂದಿಸಿರಲಿಲ್ಲ. ಆದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications