ಮಕ್ಕಳು ತಪ್ಪಿಸಿಕೊಂಡು ಹೋಗುವುದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ? ಹೈಕೋರ್ಟ್ ಸರಕಾರಕ್ಕೆ ಪ್ರಶ್ನೆ
ಬೆಂಗಳೂರು, ಮಾ.10: ರಾಜ್ಯದಾದ್ಯಂತ ಬಾಲಮಂದಿರದಿಂದ ಮಕ್ಕಳು ತಪ್ಪಿಸಿಕೊಂಡು ಹೋಗುವುದನ್ನು ತಡೆಯಲು ಏನೇನು ಕ್ರಮ ಕೈಗೊಂಡಿದ್ದೀರಿ, ಅವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಬಾಲಮಂದಿರಗಳಿಂದ ಕಣ್ಮರೆಯಾಗಿರುವ 141 ಮಕ್ಕಳನ್ನು ಪತ್ತೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೋಲಾರದ ಕೆ.ಸಿ ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.
ಸರ್ಕಾರದ ವಾದ ಆಲಿಸಿದ ಬಳಿಕ ನ್ಯಾಯಪೀಠ, ಸರ್ಕಾರಿ ಬಾಲಮಂದಿರದಿಂದ 2014ರಿಂದ 2021ರ ಅಕ್ಟೋಬರ್‌ವರೆಗೆ ಬಾಲಮಂದಿರಗಳಿಂದ ತಪ್ಪಿಸಿಕೊಂಡು ಹೋಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿ ನೀಡಬೇಕು. ಜೊತೆಗೆ ಬಾಲಮಂದಿರದಿಂದ ಮಕ್ಕಳು ತಪ್ಪಿಸಿಕೊಂಡು ಹೋಗದಿರುವುದನ್ನು ಖಾತ್ರಿಪಡಿಸಲು ಏನೆಲ್ಲಾ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ಎರಡು ವಾರದಲ್ಲಿ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಸರ್ಕಾರದ ಪರ ವಕೀಲರು , ಸರ್ಕಾರದ ಬಾಲಮಂದಿರದಿಂದ 2014-2015ರಿಂದ 2021ರ ಅಕ್ಟೋಬರ್‌ವರೆಗೆ ತಪ್ಪಿಸಿಕೊಂಡು ಹೋಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿ ಒದಗಿಸಲು ಅರ್ಜಿದಾರರು ಬಯಸಿದ್ದಾರೆ. ಈ ಬಗ್ಗೆ ವಿವಿಧ ಇಲಾಖೆಯಿಂದ ಮಾಹಿತಿ ಪಡೆಯಬೇಕಿದೆ. ಆದ್ದರಿಂದ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
141 ಮಕ್ಕಳು ನಾಪತ್ತೆ:
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ರಾಜ್ಯದ ಸರ್ಕಾರಿ ಬಾಲಮಂದಿರಗಳಿಂದ ಕಣ್ಮರೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ತನಿಖೆಯ ವಿವರಗಳನ್ನು ನೀಡುವಂತೆ ನಿರ್ದೇಶನ ನೀಡಿತು.
ಅಲ್ಲದೆ, ಅರ್ಜಿದಾರರು ತಿಳಿಸಿರುವಂತೆ ರಾಜ್ಯದ ಸರ್ಕಾರಿ ಮಕ್ಕಳ ಆರೈಕೆ ಕೇಂದ್ರಗಳಿಂದ ಕಣ್ಮರೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳು, ತನಿಖೆಯ ಸ್ಥಿತಿಗತಿಯ ವಿವರವನ್ನು ಸರ್ಕಾರ ನೀಡಬೇಕು ಎಂದು ಆದೇಶಿಸಿತು.
ಬಾಲನ್ಯಾಯ ಪೊಲೀಸ್ ಠಾಣೆಗಳಿಲ್ಲ:
ಅರ್ಜಿದಾರರ ಪರ ವಕೀಲರು, ಮಹಿಳಾ ಮತ್ತು ಮಕ್ಕಳ ಇಲಾಖೆ ಆರ್‌ಟಿಐ ನೀಡಿರುವ ಮಾಹಿತಿಯಂತೆ 2015-16ರಿಂದ 2021ರ ಅಕ್ಟೋಬರ್ ವರೆಗೆ ರಾಜ್ಯದ ಸರ್ಕಾರಿ ಚೈಲ್ಡ್ ಕೇರ್ ಕೇಂದ್ರಗಳಿಂದ 420 ಮಕ್ಕಳು ನಾಪತ್ತೆಯಾಗಿರುವ ಪ್ರಕರಣಗಳ ಎಫ್ ಐಆರ್ ದಾಖಲಾಗಿವೆ, ಆದರೆ ಈವರೆಗೂ ಇನ್ನೂ 141 ಮಕ್ಕಳು ಪತ್ತೆಯಾಗಿಲ್ಲ. ಆ ಬಗ್ಗೆ ಪೊಲೀಸರು ತನಿಖೆಯನ್ನೂ ನಡೆಸಿಲ್ಲ ಎಂದರು.
ಬಾಲ ನ್ಯಾಯ ಕಾಯಿದೆ ಪ್ರಕಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಕ್ಕಳ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಪೊಲೀಸ್ ಘಟಕಗಳನ್ನು ಹೊಂದಿರಬೇಕು, ಆದರೆ ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಮಾಮೂಲಿ ಪೊಲೀಸ್ ದೂರು ನೀಡಿದ್ದರೂ ಏನೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಮಕ್ಕಳ ರಕ್ಷಣೆ ಇಲ್ಲದಾಗಿದೆ ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚುತ್ತಿವೆ. ಆದರೆ ಪೊಲೀಸರು ಅಂತಹ ಪ್ರಕರಣಗಳಲ್ಲಿ ಯಾವುದೇ ಕ್ರಮ ಜರುಗಿಸುತ್ತಿಲ್ಲ, ಗಂಭೀರವಾಗಿ ತನಿಖೆಯನ್ನೂ ನಡೆಸುತ್ತಿಲ್ಲ. ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡು ಸುಮ್ಮನಾಗುತ್ತಾರೆ, ಹಾಗಾಗಿ ಇಂತಹ ಗಂಭೀರ ಪ್ರಕರಣಗಳಲ್ಲಿ ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಬೇಕು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications