ಹಾಸನ: ಆರ್ಥಿಕ ಸಂಕಷ್ಟ, ಆತ್ಮಹತ್ಯೆಗೆ ಶರಣಾದ ಕುಟುಂಬ
ಹಾಸನ, ಜು. 06: ಹಣಕಾಸು ಮುಗ್ಗಟ್ಟು ಎದುರಿಸಲಾರದೇ ನೊಂದ ದಂಪತಿ ತಮ್ಮ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನದ ಹಡ್ಲಿಮನೆ ಪ್ರದೇಶದ ವ್ಯಾಪ್ತಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೊದಲು 11 ವರ್ಷದ ಬಾಲಕಿ ಭೂಮಿಕಾಳನ್ನು ನೇಣಿಗೆ ಏರಿಸಿದ ತಂದೆ ತಾಯಿ ನಂತರ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!]

ಹಾಸನದ ಪೆನ್ಶನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜೈ ಶಂಕರ್ (35) ಅವರ ಪತ್ನಿ ತರುಣಾ(32) ನೇಣಿಗೆ ಶರಣಾಗಿದ್ದಾರೆ. ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಜೈ ಶಂಕರ್ 18 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೇ ಪರಿತಪಿಸುತ್ತಿದ್ದರು. ಇತ್ತೀಚೆಗೆ ಸಾಲಗಾರರು ತೀವ್ರ ಒತ್ತಡವನ್ನು ಹಾಕಿದ್ದರು. ಇದೆಲ್ಲದರಿಂದ ಮನನೊಂದ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದೆ.[ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಜೈ ಶಂಕರ್ ತನ್ನ ಅನೇಕ ಸ್ನೇಹಿತರಿಗೆ ಕರೆ ಮಾಡಿದ್ದರು. ಅಲ್ಲದೇ ತಾನು ಸಾವಿಗೆ ಶರಣಾಗುತ್ತೇನೆ ಎಂದು ತಿಳಿಸಿದ್ದರು ಎನ್ನಲಾಗಿದೆ. ಹಾಸನದ ಪೆನ್ಶನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications