ಹನೂರು ಶೂಟೌಟ್ ಕಿಚ್ಚಿಗೆ ಕರ್ನಾಟಕ-ತಮಿಳುನಾಡು ಸಿಎಂ ವಾರ್; ವಿಜಯ್‌ಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು!
ಬೆಂಗಳೂರು: ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೀಡಿರುವ ಹೇಳಿಕೆಗೆ ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಆಂತರಿಕ ವಿಚಾರಗಳ ಬಗ್ಗೆ ತಮಿಳುನಾಡು ಸಿಎಂ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿರುವ ಡಿಕೆ ಶಿವಕುಮಾರ್ ಅವರು, ಪ್ರಕರಣದ ಕುರಿತು ರಾಜ್ಯ ಸರ್ಕಾರ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹನೂರು ಶೂಟೌಟ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ತಮಿಳುನಾಡು ಮಾಜಿ ಸಿಎಂ ಪನೀರ್ ಸೇಲ್ವಂ ಅವರ ಹೇಳಿಕೆ ಕುರಿತು ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಇದು ಒಕ್ಕೂಟ ವ್ಯವಸ್ಥೆ. ಯಾವುದೇ ರಾಜ್ಯವೂ ಇನ್ನೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಪನ್ನೀರ್‌ಸೆಲ್ವಂ ಆಗಲಿ ಅಥವಾ ಯಾರೇ ಆಗಲಿ, ಅವರಿಗೆ ಕನಿಷ್ಠ ಸಂಸ್ಕೃತಿ ಇರಬೇಕು ಎಂದು ತಿರುಗೇಟು ನೀಡಿದರು.

ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲಿ ನಾನು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸಮಸ್ಯೆ ಇರುತ್ತದೆ. ಅದನ್ನು ಅವರೂ ತಿಳಿದುಕೊಳ್ಳಬೇಕು. ನಮ್ಮ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಅವರು ತಮ್ಮ ಕೆಲಸವನ್ನು ಮಾಡಲಿ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಾನು ಬಯಸುವುದಿಲ್ಲ. ನಮ್ಮ ರಾಜ್ಯಕ್ಕಿರುವ ಪವಿತ್ರತೆಯನ್ನು ನಾವು ಕಾಪಾಡಿಕೊಳ್ಳಬೇಕು, ರಕ್ಷಿಸಬೇಕು ಎಂದು ತಿಳಿಸಿದರು.
ಪ್ರಕರಣದ ತನಿಖೆ ಆಗಬೇಕು ಎಂದು ತಮಿಳುನಾಡು ಸಿಎಂ ವಿಜಯ್ ಹೇಳಿಕೆ ನೀಡಿರುವ ಹೇಳಿಕೆ ಕುರಿತು ಮಾತನಾಡಿ, ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇದು ಸಾಮಾನ್ಯ ಚರ್ಚೆ. ಅವರು ತಮ್ಮ ಕೆಲಸವನ್ನು ಮಾಡಬೇಕು, ನಾವು ನಮ್ಮ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.


Click it and Unblock the Notifications
