ಹೆಚ್ ವಿಶ್ವನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧೆ? : ಯಾವ ಕ್ಷೇತ್ರದಿಂದ ಗೊತ್ತಾ?
ಬೆಂಗಳೂರು, ಡಿಸೆಂಬರ್ 07: ರಾಜ್ಯ ವಿಧಾನಸಭಾ ಚುನಾವಣೆ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿರುವ ಕಾಂಗ್ರೆಸ್, 2024 ರ ಲೋಕಸಭಾ ಚುನಾವಣೆಯನ್ನ ಗೆಲ್ಲಲು ಭರ್ಜರಿ ತಯಾರಿ ನಡೆಸಿದ್ದು, ಪ್ರತಿ ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
ಹೌದು, ಪಂಚ ಗ್ಯಾರಂಟಿಗಳಿಂದಾಗಿ ರಾಜ್ಯದ ಜನತೆಯಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಾಗಿದ್ದು, ಇತ್ತ ಹಾಲಿ ಬಿಜೆಪಿಯ ಸಂಸದರಿಗೆ ಈ ಬಾರೀ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವುದು ಅನುಮಾನವಾಗಿದ್ದು, ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಬಂದಿರುವ ಹಿರಿಯ ಕುರುಬ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಹಳ್ಳಿ ಹಕ್ಕಿ ಹೆಚ್ ವಿಶ್ವನಾಥ್ ಮುಂದಿನ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಚಿಂತನೆ ನಡೆಸಿದ್ದಾರೆ.

ಈಗಾಗಲೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದ ಹಳ್ಳಿ ಹಕ್ಕಿಗೆ ಹೆಚ್ ವಿಶ್ವನಾಥ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದು, ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಿಂದ ಈ ಬಾರೀ ಹಲವು ನಾಯಕರು ಟಿಕೆಟ್ ರೇಸ್ ನಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಮಾಜಿ ಶಾಸಕರಾದ ಯತೀಂದ್ರ ಅವರು ಸ್ಪರ್ಧೆ ಮಾಡಲಿಲ್ಲ ಎಂದರೇ ನನಗೆ ಅವಕಾಶ ಕೊಡಿ ಎಂದು ಹೆಚ್ ವಿಶ್ವನಾಥ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಇದು ನನ್ನ ಜೀವನದ ಕೊನೆ ಚುನಾವಣೆ ಎಂದು ಟಿಕೆಟ್ ಗೆ ಬೇಡಿಕೆ ಇಟ್ಟಿರುವ ವಿಶ್ವನಾಥ್, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಾರೀ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ ಅಂದ್ರೆ ಒಕ್ಕಲಿಗರಿಗೆ ಟಿಕೆಟ್ ಕೊಡಿಸಬೇಕು ಎಂಬ ಲೆಕ್ಕಾಚಾರವನ್ನ ಡಿ ಕೆ ಶಿವಕುಮಾರ್ ಅವರು ಹಾಕಿಕೊಂಡಿದ್ದು, ಕುರುಬ ಸಮುದಾಯದ ಹಿರಿಯ ನಾಯಕ ಹೆಚ್ ವಿಶ್ವನಾಥ್ ಅವರು ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಿದ್ದು, ಕುರುಬ ಸಮುದಾಯ ಹಾಗೂ 40 ವರ್ಷಕ್ಕೂ ಹೆಚ್ಚಿನ ರಾಜಕೀಯ ಜೀವನ ಕಂಡಿರುವ ಹೆಚ್ ವಿಶ್ವನಾಥ್ ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿಕೆಟ್ ಗಾಗಿ ಹಲವು ಕಾಂಗ್ರೆಸ್ ನಾಯಕರು ರೇಸ್ ನಲ್ಲಿ?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಹಲವು ನಾಯಕರು ರೇಸ್ ನಲ್ಲಿದ್ದು, ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರ ತ್ಯಾಗ ಮಾಡಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿದ್ದು, ಈಗಾಗಲೇ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ವೀಕ್ಷಕರನ್ನ ನೇಮಕ ಮಾಡಿದ್ದಾರೆ.
ಇನ್ನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ವಕ್ತಾರ ಲಕ್ಷ್ಮಣ್ , ವರುಣಾ ಮಹೇಶ್ ಮತ್ತು ವೈದ್ಯ ಸೃಶೃತ್ ಹಾಗೂ ಕುರುಬ ಸಮುದಾಯದ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಟಿಕೆಟ್ ರೇಸ್ ನಲ್ಲಿದ್ದು, ಅಂತಿಮವಾಗಿ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನ ಕಾದುನೋಡ್ಬೇಕು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಹೆಚ್ ವಿಶ್ವನಾಥ್ ಹೇಳಿದ್ದೇನು?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತೇನೆ. ನಾನು ಕಾಂಗ್ರೆಸ್‌ನಿಂದ ಸಂಸದನಾಗಿದ್ದೇನೆ. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ರಾಜಕೀಯ ಜೀವನದ ಅತಿ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದೆ. ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಬಾವುಟ ಬದಲಾಗುತ್ತದೆ. ಆದರೆ, ಅಜೆಂಡಾ ಬದಲಾಗುವುದಿಲ್ಲ. ಯಾವುದೋ ಗಳಿಗೆಯಲ್ಲಿ ಕಾಂಗ್ರೆಸ್ ಬಿಟ್ಟಿದ್ದೆ. ಈಗ ಮತ್ತೊಮ್ಮೆ ಏಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಪ್ರಶ್ನಿಸಿದರು.












Click it and Unblock the Notifications