KN Rajanna: ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ? ಸಂಚಲನ ಮೂಡಿಸಿದ ಆ ಫೇಸ್‌ಬುಕ್ ಪೋಸ್ಟ್!
ತುಮಕೂರು, ಫೆಬ್ರವರಿ 26: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಣ ಬಡಿದಾಟ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ ಅವರು ಪಟ್ಟು ಹಿಡಿದಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ವಿರುದ್ಧವೇ ಬಹಿರಂಗ ಹೇಳಿಕೆ ನೀಡುವ ಮೂಲಕ ಡಿಕೆ ಬಣದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸಚಿವ ರಾಜಣ್ಣ ಅವರಿಗೆ ಸ್ಥಳೀಯ ಮಟ್ಟದಲ್ಲಿ ಬಣ ರಾಜಕಾರಣ ಸದ್ದು ಮಾಡುತ್ತಿದ್ದು, ಶೀಘದಲ್ಲಿ ಸಚಿವ ಸ್ಥಾನಕ್ಕೆ ರಾಜಣ್ಣ ಅವರು ರಾಜೀನಾಮೆ ನೀಡುತ್ತಾರೆ ಎಂಬ ಪೋಸ್ಟ್ ಭಾರೀ ಸಂಚಲನವನ್ನ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಬಣದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಸಚಿವ ಕೆಎನ್ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಈ ಸುದ್ದಿಗೆ ಪ್ರಮುಖ ಕಾರಣವೆನ್ನೆಂದರೇ ಕೆ ಎನ್ ರಾಜಣ್ಣ ಹಾಗೂ ಸ್ಥಳೀಯ ನಾಯಕರ ನಡುವೆ ತೀವ್ರ ಮನಸ್ಥಾಪ ಎದುರಾಗಿದೆ. ತುಮುಲ್ ಚುನಾವಣೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿ ಅವರು ಅಧ್ಯಕ್ಷ ಸ್ಥಾನದಿಂದ ವಂಚಿತರಾದದ್ದು. ಈ ಸೋಲಿಗೆ ಕೆ.ಎನ್. ರಾಜಣ್ಣ ಮತ್ತು ಗೃಹ ಸಚಿವ ಪರಮೇಶ್ವರ್ ಅವರೇ ಕಾರಣ ಎಂದು ಬಹಿರಂಗವಾಗಿಯೇ ಗುಬ್ಬಿ ಶ್ರೀನಿವಾಸ್ ಆರೋಪಿಸಿದ್ದರು.

ತುಮುಲ್ ಚುನಾವಣೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿ ಅವರು ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಕಾರಣ ಕೋಪಗೊಂಡ ಶಾಸಕ ಗುಬ್ಬಿ ಶ್ರೀನಿವಾರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಜಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀನಿವಾಸ್ ಅವರ ಫ್ಯಾನ್ಸ್ ಪೇಜ್‌ನಲ್ಲಿ ರಾಜಣ್ಣ ಅವರು ಕಂಪ್ಯೂಟರ್ ನೋಡುತ್ತಿರುವ ಚಿತ್ರವನ್ನು ಎಡಿಟ್ ಮಾಡಿ ಹಾಕಿ, ಅವರು ಶೀಘ್ರದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಶಾಸಕ ಎಸ್.ಆರ್.ಶೀನಿವಾಸ್ ಗುಬ್ಬಿ ಎಂಎಲ್ಎ, ಫ್ಯಾನ್ಸ್ ಫೇಜ್ ನಲ್ಲಿ ರಾಜಣ್ಣ ರಾಜೀನಾಮೆ ಎನ್ನುವ ಪೋಸ್ಟ್ ಅನ್ನು ಹಾಕಿದ್ದಾರೆ. ಹಲವು ದಿನಗಳಿಂದ, ಶಾಸಕರ ಅಭಿಮಾನಿಗಳ ಹೆಸರಿನ ಈ ಫೇಸ್ ಬುಕ್ ಪೇಜ್ ನಲ್ಲಿ ನಿರಂತರವಾಗಿ, ಸಚಿವ ರಾಜಣ್ಣ ಮತ್ತು ಪರಮೇಶ್ವರ್ ವಿರುದ್ದದ ಪೋಸ್ಟ್ ಗಳು ಹರಿದಾಡುತ್ತಲೇ ಇದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಮನಸ್ತಾಪದಿಂದ ಜೆಡಿಎಸ್ ತೊರೆದಿದ್ದ ಶ್ರೀನಿವಾಸ್, ಅದ್ಯಾವಾಗ ಕಾಂಗ್ರೆಸ್ ಪಾರ್ಟಿಗೆ ರಾಜೀನಾಮೆ ನೀಡುತ್ತಾರೋ ಗೊತ್ತಿಲ್ಲ ಎಂದು ಜಿಲ್ಲೆಯ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಕೂಡಾ ಹೇಳಿದ್ದರು. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ಶ್ರೀನಿವಾಸ್ ಅವರು ನಾನು ತುಮಕೂರು ಜಿಲ್ಲೆಯ ಎಲ್ಲಾ ಶಾಸಕರ ಜೊತೆಗೆ ನನಗೆ ಉತ್ತಮ ಒಡನಾಟವನ್ನು ಇಟ್ಟು ಕೊಂಡಿದ್ದೇನೆ, ನಾನು ಯಾರ ಜೊತೆಗೂ ವೈಷಮ್ಯವನ್ನು ಬೆಳೆಸಿಕೊಂಡಿಲ್ಲ. ಆದರೂ, ನನ್ನ ಸಣ್ಣ ಬೇಡಿಕೆಯನ್ನು ಈಡೇರಿಸಲಿಲ್ಲ. ನನಗೂ ಟೈಂ ಬರುತ್ತೆ ಎಂದು ಹೇಳಿದ್ದರು.












Click it and Unblock the Notifications